ಯಳಂದೂರು: ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಇಬ್ಬರನ್ನು ಸೋಮವಾರ ರಾತ್ರಿ ಬಂಧಿಸಿ ಮಾಲು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಆಹಾರ ನಿರೀಕ್ಷಕ ಬಿಸಲಯ್ಯ ತಾಲೂಕಿನ ಮಾಂಬಳ್ಳಿ ಗ್ರಾಮದ ಕಿನಕಹಳ್ಳಿ ಕ್ರಾಸ್ ಬಳಿ ಮಾಂಬಳ್ಳಿ ಪೊಲೀಸರ ಸಹಕಾರದೊಂದಿಗೆ ಪ್ಯಾಸೆಂಜರ್ ಆಟೋದಲ್ಲಿ (ಕೆ.ಎ.19 ಸಿ.4201) ಮೇಲೆ ದಾಳಿ ನಡೆಸಿದ್ದಾರೆ. ಆಟೋದಲ್ಲಿ 7 ಚೀಲಗಳಲ್ಲಿದ್ದ 6,670 ರೂ. ಮೌಲ್ಯದ 444 ಕಿಲೋ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಮದ್ದೂರು ಗ್ರಾಮದ ಅಸ್ಲಂಪಾಷ ಹಾಗೂ ಮುಳ್ಳೂರು ಗ್ರಾಮದ ಸುದೀಪ್‌ನನ್ನು ವಶಕ್ಕೆ ಪಡೆಯಲಾಗಿದೆ. ಮುಳ್ಳೂರು ಗ್ರಾಮದಲ್ಲಿ ಈ ಇಬ್ಬರೂ ಅಕ್ಕಿ ಖರೀದಿಸಿ ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ವಹಿಸಲಾಗಿದೆ.
ದಾಳಿಯಲ್ಲಿ ಮಾಂಬಳ್ಳಿ ಪಿಎಸ್‌ಐ ಕರಿಬಸಪ್ಪ, ಹೆಡ್ ಕಾನ್‌ಸ್ಟೆಬಲ್ ಪರಶಿವಮೂರ್ತಿ, ಕಿಶೋರ್, ಪೇದೆಗಳಾದ ಶಿವಕುಮಾರ್, ಬಸವರಾಜ್ ಗುತ್ತಲ್ ಪಾಲ್ಗೊಂಡಿದ್ದರು.