ಜಿಲ್ಲೆ

ಸ್ವಯಂಸೇವಕರೆಂದು ಶವ ಸುಡಲು ಹಣ ಪಡೆಯುತ್ತಿದ್ದ ಇಬ್ಬರ ಸೆರೆ

ಬೆಂಗಳೂರು : ಬಿಬಿಎಂಪಿ ಸ್ವಯಂಸೇವಕರೆಂದು ಸುಳ್ಳು ಹೇಳಿ ಕರೊನಾ ರೋಗದಿಂದ ಮೃತಪಟ್ಟವರ ಶವ ಸುಡಲು ಹಣ ಪಡೆಯುತ್ತಿದ್ದ ಇಬ್ಬರನ್ನು ನಗರದ ಬಂಡೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಜೆ.ಪಿ. ನಗರದ ನಿವಾಸಿ ಶಿವಾಂತ(24) ಮತ್ತು ಸೆಲ್ವ ಮೀನಲ್(25) ಬಂಧಿತರು.

ಶಿವಂತ ಹಾಗೂ ಸೆಲ್ವ ಮೀನಲ್ ಬಿಬಿಎಂಪಿಯಲ್ಲಿ ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಹೇಳುತ್ತಿದ್ದರು. ನಂತರ ಕರೊನಾದಿಂದ ಮೃತಪಟ್ಟವರ ಸಂಬಂಧಿಕರನ್ನು ಸಂಪರ್ಕಿಸಿ ಶವವನ್ನು ಸುಡುತ್ತೇವೆ. ಇದಕ್ಕೆ 12 ಸಾವಿರ ರೂ. ಕೊಡುವಂತೆ ಬೇಡಿಕೆ ಇಡುತ್ತಿದ್ದರು. ಬಿಬಿಎಂಪಿ ಸ್ವಯಂ ಸೇವಕರಾದರೆ ಉಚಿತವಾಗಿ ಸೇವೆ ಸಲ್ಲಿಸಬೇಕು ಎಂಬ ನಿಯಮವಿದೆ. ಆದರೆ, ಆರೋಪಿಗಳು ಹಣ ಸಂಪಾದಿಸುವ ಉದ್ದೇಶದಿಂದ ಕೃತ್ಯ ಎಸಗುತ್ತಿದ್ದರು ಎನ್ನಲಾಗಿದೆ.

ಆರೋಪಿಗಳು ಹೊಸಪಾಳ್ಯದಲ್ಲಿರುವ ಬಿಬಿಎಂಪಿ ವಿದ್ಯುತ್ ಚಿತಾಗಾರದಲ್ಲಿ ಮೇ 6 ರಂದು ಸಂಜೆ ಕರೊನಾದಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವವನ್ನು ಸುಡುವುದಾಗಿ ಹೇಳಿ ಅವರ ಸಂಬಂಧಿಕರಿಂದ 12 ಸಾವಿರ ರೂ. ಪಡೆದಿದ್ದರು. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಮಹೇಶ್ ಕೊಟ್ಟ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ಬಂಧಿಸಿದ್ದಾರೆ.