ಶಿರಸಿ: ಸಾಗವಾನಿ ಮರದ ತುಂಡುಗಳನ್ನು ಕದ್ದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬನವಾಸಿ ಸಮೀಪದ ಬೆಳ್ಳನಕೇರಿಯಲ್ಲಿ ಸೋಮವಾರ ಬಂಧಿಸಿದ್ದಾರೆ.
ತಾಲೂಕಿನ ಕುಪ್ಪಗಡ್ಡೆಯ ಸುನೀಲ್ ಮಲ್ಲೇಶಪ್ಪ ಮಡಿವಾಳ ಹಾಗೂ ಸದ್ದಾಂ ಹುಸೆನ್ ಅಬ್ದುಲ್ ಜಬ್ಬಾರ್ ಶೇಖ ಬಂಧಿತ ಆರೋಪಿಗಳು. ಇವರು ಬೆಳ್ಳನಕೇರಿ ಭಾಗದಲ್ಲಿ ಸಾಗಾಟದ ಉದ್ದೇಶದಿಂದ 10 ಸಾಗವಾನಿ ತುಂಡುಗಳನ್ನು ಕತ್ತರಿಸಿಟ್ಟಿದ್ದರು. ಡಿಎಫ್‌ಒ ಡಾ. ಅಜ್ಜಯ್ಯ ಜೆ. ಆರ್., ಎಸ್.ಎಸ್. ನಿಂಗಾಣಿ, ವಲಯಾರಣ್ಯಾಧಿಕಾರಿ ಭವ್ಯಾ ನಾಯ್ಕ ಅವರು ಆರೋಪಿಗಳನ್ನು ಪತ್ತೆಹಚ್ಚುವ ಸಲುವಾಗಿ ಬಲೆ ಬೀಸಿ, ಆ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದರು. ಆರೋಪಿಗಳು ಸಾಗವಾನಿ ತುಂಡುಗಳನ್ನು ಸಾಗಿಸುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು. ತಕ್ಷಣ ದಾಳಿ ನಡೆಸಿದ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ ಸಾಗವಾನಿ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಾರ್ತಿಕ ನಾರ್ವೇಕರ್, ಮಾಲ್ತೇಶ ಬಾರ್ಕಿ, ಅರಣ್ಯ ಪಾಲಕರಾದ ವಿದ್ಯಾಶ್ರೀ ಜಾಧವ, ರಮೇಶ ಎಚ್.ಸಿ., ಸಿದ್ದು ನಾವಿ ಹಾಗೂ ನೌಕರ ನನ್ನೇಸಾಬ್ ಹುಸೇನ್ ಪಾಲ್ಗೊಂಡಿದ್ದರು.