ಶ್ರೀರಂಗಪಟ್ಟಣ ತಾಲೂಕಿನ ನೆಲಮನೆ ಗ್ರಾಮ ಹೊರವಲಯದ ಬಳಿ ಸೇಂದಿ ಸಾಗಿಸುತ್ತಿದ್ದ ಇಬ್ಬರನ್ನು ಪಾಂಡವಪುರ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕಿ ರಮ್ಯಾ ಅವರ ನೇತೃತ್ವದಲ್ಲಿ ಸಿಬ್ಬಂದಿ ವಶಕ್ಕೆ ಪಡೆದರು. 
ಜಿಲ್ಲೆ

ಸೇಂದಿ ಸಾಗಿಸುತ್ತಿದ್ದ ಇಬ್ಬರ ಬಂಧನ

ಲೋಕೇಶ್ ಮನು. ಡಿ

ಶ್ರೀರಂಗಪಟ್ಟಣ: ತಾಲೂಕಿನ ನೆಲಮನೆ ಗ್ರಾಮ ಹೊರವಲಯದಲ್ಲಿ ಸೇಂದಿ ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ದಾಳಿ ಮಾಡಿದ ಅಬಕಾರಿ ಪೊಲೀಸರು, ಮಾಲು ಸಮೇತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಗ್ರಾಮದ ವೆಂಕಟರಾಮು ಅಲಿಯಾಸ್ ಶಂಕರ್ ಹಾಗೂ ಆತನ ಜತೆಗಾರ ರವಿಕುಮಾರ್ ಬಂಧಿತರು. ಈ ಇಬ್ಬರು ಗುರುವಾರ ಗ್ರಾಮದಿಂದ ಕೂಡಲಕುಪ್ಪೆ ಗ್ರಾಮಕ್ಕೆ ತೆರಳುವ ನಾಲೆ ಏರಿ ರಸ್ತೆಯಲ್ಲಿ 30 ಲೀ. ಸೇಂದಿಯನ್ನು ದ್ವಿಚಕ್ರ ವಾಹನದಲ್ಲಿ ಸಾಗಾಟ ಮಾಡುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಬಸವರಾಜ ಹಡಪದ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಅಬಕಾರಿ ಉಪ ಆಯುಕ್ತ ಡಾ.ಆರ್.ನಾಗಶಯನ ಅವರ ನಿರ್ದೇಶನದಲ್ಲಿ ಪಾಂಡವಪುರ ಉಪ ವಿಭಾಗ ಉಪ ಅಧೀಕ್ಷಕಿ ರಮ್ಯಾ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದರು.