ಜಿಲ್ಲೆ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಇಬ್ಬರ ಬಂಧನ

ಶಿವಶಂಕರ್ ಎಂ. ಹೆಬ್ಬಳ್ಳ

ಕೆ.ಆರ್.ಪೇಟೆ : ವಸತಿ ನಿಲಯದಲ್ಲಿ ಓದುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಬೈಕಿನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರು ಯುವಕರನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಯ ವಡ್ಡರಹಟ್ಟಿ ಗ್ರಾಮದ ಶಿವಣ್ಣರ ಪುತ್ರ ವಿ.ಎಸ್.ಜಗದೀಶ್, ಶಂಕರ್ ಅವರ ಮಗ ವಿ.ಎಸ್.ದೀಪು ಬಂಧಿತರು.
ಮೇ 28ರಂದು ಸಂಜೆ ಪಟ್ಟಣದ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿನಿಯನ್ನು ಆರೋಪಿಗಳು ಹೊಸಹೊಳಲು ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಪುಸಲಾಯಿಸಿ ಕರೆದೊಯ್ದು ಹೊಸಹೊಳಲು ಅರಣ್ಯ ಪ್ರದೇಶದಲ್ಲಿ ಬೆದರಿಸಿ ಬೆತ್ತಲೆ ಮಾಡಿ, ಮೊಬೈಲ್ನಿಂದ ಫೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದಾರೆ. ನಂತರ ಜಗದೀಶ್‌ಮೊದಲು ಅತ್ಯಾಚಾರ ಮಾಡಿದ್ದಾನೆ. ಅನಂತರ ದೀಪು ಅತ್ಯಾಚಾರ ಮಾಡಿದ್ದಾನೆ. ಮೋಸದಿಂದ, ಬಲವಂತದಿಂದ ಅತ್ಯಾಚಾರ ಮಾಡಿದ್ದನ್ನು ಪ್ರಶ್ನಿಸಿದ ವಿದ್ಯಾರ್ಥಿನಿಗೆ ದೈಹಿಕ ಹಲ್ಲೆ ನಡೆಸಿದ್ದಾರೆ. ಯಾರಿಗಾದರೂ ಹೇಳಿದರೆ ಕೊಲೆ ಮಾಡುವ ಬೆದರಿಕೆ ಹಾಕಿ ವಾಪಸ್ ಮಹಿಳಾ ಕಾಲೇಜು ಬಳಿ ಕೆಳಕ್ಕೆ ಇಳಿಸಿ ಹೋಗಿರುವುದಾಗಿ ಸಂತ್ರಸ್ಥ ವಿದ್ಯಾರ್ಥಿನಿ ಪೋಲಿಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.