ಶಿರಸಿ: ನಗರದಲ್ಲಿ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ.
ಇಲ್ಲಿಯ ನರೇಬೈಲ್ನ ಉಬೇದ (ಸಲೀಂ) ಜವಳಿ ಎಂಬಾತ ಪಡಿತರ ಚೀಟಿದಾರರಿಂದ ಸುಮಾರು 40 ಕ್ವಿಂಟಾಲ್ನಷ್ಟು ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ತನ್ನ ಹಿಟ್ಟಿನ ಗಿರಣಿಯಲ್ಲಿ ಸಂಗ್ರಹಿಸಿಟ್ಟುಕೊಂಡು ಇಸಳೂರಿನ ಸುನೀಲ ಮಹಾದೇವಪ್ಪ ನಡಗಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದ. ಶನಿವಾರ ಸಂಜೆ ವಾಹನದಲ್ಲಿ ಸಾಗಿಸುತ್ತಿರುವಾಗ ಪೊಲೀಸರು ದಾಳಿ ನಡೆಸಿ ವಾಹನ ಸಮೇತ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಸುನೀಲ ಮಹಾದೇವಪ್ಪ ನಾಡಗಿ ಹಾಗೂ ವಾಹನ ಚಾಲಕ ಕಸ್ತೂರಬಾ ನಗರದ ಅಲ್ತಾಫ ರೆಹಮತ್ ಉಲ್ಲಾ ಶೇಖ್‌ನನ್ನು ಬಂಧಿಸಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.