ವಿಜಯವಾಣಿ ಸುದ್ದಿಜಾಲ ಉಡುಪಿ
ಕೋಟ ಠಾಣಾ ವ್ಯಾಪ್ತಿಯಲ್ಲಿರುವ ಶಾಲಾ-ಕಾಲೇಜುಗಳ ಶಾಲಾ ವಾಹನಗಳಿಗೆ ಹೊಸ ವಿಮೆ ಪಾಲಿಸಿ ಮಾಡಿಸುವುದಾಗಿ ಹಣ ಪಡೆದು, ನಕಲಿ ವಿಮೆ ವಿತರಿಸಿ ವಂಚಿಸುವ ಮೂಲಕ ಹಣ ಗಳಿಕೆ ಮಾಡಿಕೊಳ್ಳುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.
ಉಡುಪಿಯ ಎಸ್ಪಿ ಕಚೇರಿಯಲ್ಲಿ ಸೋಮವಾರ (ಅ.6) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದ ರಾಕೇಶ ಸುರೇಶ ಸಾಲ್ಯಾನ್ (33) ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಚರಣ ಬಾಬು ಮೇಸ್ತ (35) ಎಂಬವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಬಂಧಿತರಿಬ್ಬರೂ ಸಹ ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹಣ ಗಳಿಸುವ ಆಸೆಯಿಂದಾಗಿ ನಕಲಿ ವಿಮೆ ಮಾಡುತ್ತಿದ್ದ ಅವರು ಶಾಲಾ ವಾಹನಗಳನ್ನೇ ಗುರಿಯಾಗಿಸಿಕೊಂಡಿದ್ದರು. ಇತರ ವಾಹನಗಳಿಗೆ ಹೋಲಿಸಿದಾಗ ಶಾಲಾ ವಾಹನಗಳು ಅಪಘಾತಕ್ಕೊಳಗಾಗುವುದು ಕಡಿಮೆ. ಹೀಗಾಗಿ ಅವರು ಅಪಘಾತದ ಕ್ಲೇಮ್ ಮಾಡುವುದೂ ತೀರ ವಿರಳವಾಗಿರುತ್ತದೆಂದು ಖಾಸಗಿ ಹಾಗೂ ಅನುದಾನಿತ ಶಾಲಾ-ಕಾಲೇಜುಗಳ ವಾಹನಗಳಿಗೆ ನಕಲಿ ವಿಮೆ ಮಾಡಿ ಕೊಡುತ್ತಿದ್ದರು.
2024ರ ನ.25ರಂದು ಕುಂದಾಪುರ ತಾಲೂಕು ಹೊಂಬಾಡಿ-ಮಂಡಾಡಿ ಗ್ರಾಮದ ಹುಣ್ಸೆಮಕ್ಕಿ ಎಂಬಲ್ಲಿ ಶಾಲಾ ವಾಹನವೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು, ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಿಕ್ಷಾದ ಚಾಲಕ ಉದಯ ಶೆಟ್ಟಿ ಎಂಬವರು ವಿಮಾ ಪರಿಹಾರವಾಗಿ ನ್ಯಾಯಾಲಯದಲ್ಲಿ 15.95 ಲಕ್ಷ ರೂ. ಕೋರಿಕೊಂಡಿದ್ದರು. ಸದ್ರಿ ಪ್ರಕರಣವನ್ನು ವಿಮಾ ಕಂಪನಿಯವರು ಪರಿಶೀಲಿಸಿದಾಗ ಶಾಲಾ ವಾಹನದ ವಿಮಾ ಪಾಲಿಸಿ ನಕಲಿ ಇರುವುದು ಕಂಡುಬಂದಿತ್ತು. ತಮ್ಮ ಕಂಪನಿ ಹೆಸರಲ್ಲಿ ನಕಲಿ ನಕಲಿ ವಿಮೆ ಸೃಷ್ಟಿಸಿ ಮೋಸ ಮಾಡಿದ್ದಾರೆ ಎಂದು ರಿಲಯನ್ಸ್ ಜನರಲ್ ಇನ್ಯೂರೆನ್ಸ್ ಕಂಪನಿಯ ಮೆನೇಜರ್ ನಿಖಿಲ್ ಜಿ.ಆರ್. ನ್ಯಾಯಾಲಯಕ್ಕೆ ದೂರು ನೀಡಿದ್ದರು.
ಉಡುಪಿ, ಕುಂದಾಪುರ, ಕೋಟ, ಬ್ರಹ್ಮಾವರ, ಶಿರೂರು, ಭಟ್ಕಳ ತಾಲೂಕಿನ ಶಾಲಾ ಬಸ್ಗಳಿಗೆ ನಕಲಿ ವಿಮೆ ಮಾಡಿಸಿದ್ದಾರೆ. ಹಳೆ ಪಾಲಿಸಿಗಳನ್ನು ಪಿಡಿಎಫ್ ಫೈಲ್ ಮಾಡಿ ಕಂಪ್ಯೂಟರ್ನಲ್ಲಿ ಸಂಗ್ರಹಿಸಿ ಪಿಡಿಎಫ್ ಆ್ಯಪ್ ಎಡಿಟರ್ ಮೂಲಕ ವಿಮೆ ಪಾಲಿಸಿಯಲ್ಲಿ ವಿಮೆಯ ನಂಬರ್, ದಿನಾಂಕ, ವಾಹನದ ನಂಬರ್ ಮತ್ತು ವಿಮಾ ಮೊತ್ತದ ಹಣವನ್ನು ತಮಗೆ ಬೇಕಾದ ರೀತಿಯಲ್ಲಿ ಎಡಿಟ್ ಮಾಡಿ ಶಾಲಾ-ಕಾಲೇಜಿಗೆ ನೀಡುತ್ತಿದ್ದರು. ಇಬ್ಬರೂ ಸೇರಿ ಒಟ್ಟು 46 ಶಾಲಾ ವಾಹನಗಳಿಗೆ ನಕಲಿ ವಿಮೆ ನೀಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಎಸ್ಪಿ ಹರಿರಾಂ ಮಾಹಿತಿ ನೀಡಿದರು.
ಉಡುಪಿ ಜಿಲ್ಲೆಯಲ್ಲಿ ಶಾಲಾ ವಾಹನಗಳಿಗೆ ನಕಲಿ ವಿಮೆ ಮಾಡಿರುವುದು ತನಿಖೆಯ ವೇಳೆ ತಿಳಿದುಬಂದಿದೆ. ಹೀಗಾಗಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಯವರು ತಮ್ಮ ಶಾಲಾ ವಾಹನಗಳ ವಿಮಾ ಪಾಲಿಸಿ ನಕಲಿಯೇ ಅಥವಾ ಅಸಲಿಯೇ ಎನ್ನುವುದನ್ನು ಒಮ್ಮೆ ಪರೀಕ್ಷಿಸಿಕೊಳ್ಳಬೇಕೆಂದು ವಿನಂತಿಸುತ್ತೇನೆ. | ಹರಿರಾಂ ಶಂಕರ್. ಉಡುಪಿ ಎಸ್ಪಿ
ಉಡುಪಿ: ಕಾರ್ಕಳ ತಾಲೂಕಿನ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರ್ಲಾಲು ಗ್ರಾಮದ ಮನೆಯೊಂದರಲ್ಲಿದ್ದ ಒಂಟಿ ಮಹಿಳೆ ಜಯಶ್ರೀ ಎಂಬವರಿಗೆ ಮೂವರು ಅಪರಿಚಿತರು ತಲವಾರು ತೋರಿಸಿ ಬೆದರಿಸಿ, ಅವರ ಕೊಟ್ಟಿಗೆಯಲ್ಲಿದ್ದ ಮೂರು ದನ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ದಡ್ಡಕಜೆಯ ಮೊಹಮ್ಮದ್ ಯೂನಿಸ್ (31), ಮೂಡುಬಿದ್ರೆ ತಾಲೂಕಿನ ಕಲ್ಲಬೆಟ್ಟು ಗ್ರಾಮದ ನೀರಲ್ಕೆ ಹೌಸ್ನ ಮೊಹಮ್ಮದ್ ನಾಸೀರ್ (28), ಮೂಡುಬಿದ್ರೆ ತಾಲೂಕಿನ ಪುತ್ತಿಗೆ ಗ್ರಾಮದ ಹಂಡೇಲು ನಿವಾಸಿ ಮೊಹಮ್ಮದ್ ಇಕ್ಬಾಲ್ (29) ಬಂಧಿತರು. ಕೃತ್ಯಕ್ಕೆ ಬಳಸಿದ್ದ 2 ತಲವಾರು, ಮಾರುತಿ ಕಾರು, ಮಹೀಂದ್ರಾ ಬೊಲೆರೋ ವಾಹನ ಹಾಗೂ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.
ಬಂಧಿತರ ವಿರುದ್ಧ ವಿವಿಧ ಠಾಣೆಗಳಲ್ಲಿ ಈಗಾಗಲೇ ಹಲವು ಪ್ರಕರಣ ದಾಖಲಿದೆ. ದನ ಕಳವು ಪ್ರಕರಣದ ತನಿಖೆ ನಡೆಸಿದಾಗ, ಮೂಡುಬಿದ್ರೆ ಗ್ರಾಮದಲ್ಲಿರುವ ಒಂದು ಮನೆಯನ್ನೇ ಕಸಾಯಿಖಾನೆಯನ್ನಾಗಿ ಮಾಡಿಕೊಂಡಿರುವುದು ಪತ್ತೆಯಾಗಿದೆ. ಕದ್ದು ತಂದ ದನಗಳನ್ನು ಇಲ್ಲಿ ವಧೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದರು. ಆ ಮನೆಯನ್ನೂ ಸಹ ಸೀಜ್ ಮಾಡಲು ಕಾನೂನು ಪ್ರಕ್ರಿಯೆ ನಡೆದಿದೆ ಎಂದು ಎಸ್ಪಿ ಹರಿರಾಂ ಮಾಹಿತಿ ನೀಡಿದ್ದಾರೆ.
ಉಡುಪಿ: ಮಲ್ಪೆ ಸಮೀಪದ ಕೊಡವೂರಿನ ಸಾಲ್ಮರದ ನಾಗಬನದ ಬಳಿ ಸೆ.27ರಂದು ಬೆಳಗ್ಗೆ ಎಕೆಎಂಎಸ್ ಖಾಸಗಿ ಬಸ್ನ ಮಾಲೀಕ ಸೈಫುದ್ದೀನ್ ಹತ್ಯೆ ಪ್ರಕರಣದ ತನಿಖೆ ಮುಂದುವರಿದಿದ್ದು, ಕೊಲೆಯ ಹಿಂದಿನ ಸಂಚು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ನಡೆದ ಮಾರನೇಯ ದಿನವೇ ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ. ಈ ಕೊಲೆ ವೈಯಕ್ತಿಕ ಕಾರಣಕ್ಕೆ ನಡೆದಿದೆಯೇ ಅಥವಾ ಇದರಲ್ಲಿ ಬೇರೆ ಯಾರಾದರೂ ಶಾಮೀಲು ಇದ್ದಾರೆಯೇ ಎಂದು ತನಿಖೆ ನಡೆಸುತ್ತಿರುವಾಗ ಹತ್ಯೆಯ ಸಂಚು ಬಯಲಾಗಿತ್ತು. ಬಂಧಿತರ ಪೈಕಿ ಓರ್ವನಾದ ಮಹಮ್ಮದ್ ಫೈಸಲ್ ಖಾನ್ (27) ಎಂಬಾತನ ಪತ್ನಿ ರಿಧಾ ಶಬನಾ (27) ಎಂಬಾಕೆಯ ಒಳ ಸಂಚಿನಿಂದ ಸೈಫುದ್ದೀನ್ನ ಹತ್ಯೆ ಮಾಡಿರುವುದು ತಿಳಿದು ಬಂದಿದೆ.
ಕಳೆದ ಒಂದು ವರ್ಷದಿಂದ ಸೈಫುದ್ದೀನ್ನು ರಿಧಾಳೊಂದಿಗೆ ಒಡನಾಟ ಇಟ್ಟುಕೊಂಡಿದ್ದ. ಆತ ಕಿರಿಕಿರಿ ನೀಡುತ್ತಿದ್ದ ಎಂದು ದೂರಲಾಗಿದೆ. ಕಳೆದ 2 ತಿಂಗಳಿಂದ ಸೈಫುದ್ದೀನ್ನ ಹತ್ಯೆ ಮಾಡಲು ಸಂಚು ನಡೆದಿತ್ತು. ಮಂಗಳೂರಿನಲ್ಲಿದ್ದ ಸೈಫುದ್ದೀನ್ಗೆ ಆತನ ಸ್ನೇಹಿತನೂ ಆಗಿದ್ದ ಮಹಮ್ಮದ್ ಫೈಸಲ್ ಖಾನ್ ಮೊಬೈಲ್ ಕರೆ ಮಾಡಿ, ತನ್ನ ಹೆಂಡತಿ ನಿನಗಾಗಿ ಕೊಡವೂರಿನಲ್ಲಿರುವ ಮನೆಯಲ್ಲಿ ಕಾಯುತ್ತಿದ್ದಾಳೆ ಎಂದು ಕರೆಸಿದ್ದಾನೆ. ಆಗಮಿಸಿದ್ದ ಸೈಫುದ್ದೀನ್ನನ್ನು ಮಣಿಪಾಲದಲ್ಲಿರುವ ಮನೆಯಿಂದ ಕಾರಿನಲ್ಲಿ ಒಟ್ಟಿಗೆ ಕೊಡವೂರಿನಲ್ಲಿದ್ದ ಮನೆಗೆ ಕರೆದುಕೊಂಡು ಹೋಗಿದ್ದನು. ಪೂರ್ವ ಸಿದ್ಧತೆಯಂತೆಯೇ ಆ ಮನೆಯ ಸಮೀಪ ಅಡಗಿದ್ದ ಇನ್ನಿಬ್ಬರು ಆರೋಪಿಗಳು ಸೇರಿ ಸೈಫುದ್ದೀನ್ನ ತಲೆಗೆ ರಾಡ್ನಿಂದ ಹೊಡೆದು, ತಲವಾರಿನಿಂದ ದೇಹವನ್ನು ಕೊಚ್ಚಿ ಹತ್ಯೆ ಮಾಡಿದ್ದರು. ಈ ಕೊಲೆಯ ಸಂಚಿನಲ್ಲಿ ಇನ್ನೂ ಅನೇಕರಿದ್ದು, ತನಿಖೆ ಮುಂದುವರಿದಿದೆ ಎಂದು ಎಸ್ಪಿ ಹರಿರಾಂ ತಿಳಿಸಿದರು.