ಜಿಲ್ಲೆ

ರಾತ್ರಿ ಗ್ಲಾಸ್ ಒಡೆದಿದ್ರು.. ಬೆಳಗ್ಗೆ ಕಂಬಿ ಎಣಿಸಿದ್ರು...

vijayavani

ಬೆಂಗಳೂರು: ಇವರಿನ್ನೂ ಚಿಗುರು ಮೀಸೆಯ ಪೋರರು. ಆದರೆ ರಾತ್ರಿ ಇವರು ಅದೆಷ್ಟೋ ಜನ ನಿದ್ರೆ ಕೆಡುವಂಥ ಕೆಲಸ ಮಾಡಿದ್ದರು. ಕೊನೆಗೂ ಇವರು ಕಿಡಿಗೇಡಿತನ ತೋರಿ ಪರಾರಿಯಾದಷ್ಟೇ ಕ್ಷಿಪ್ರವಾಗಿ ಕಾರ್ಯಪ್ರವೃತ್ತರಾದ ಪೊಲೀಸರು ಬೆಳಗಾಗುವಷ್ಟರಲ್ಲಿ ಇವರನ್ನು ಬಂಧಿಸಿದ್ದರು.

ಮನೆ ಮುಂದೆ ಮತ್ತು ರಸ್ತೆಬದಿ ನಿಲ್ಲಿಸಿದ್ದ ಕಾರು, ಆಟೋ ರಿಕ್ಷಾಗಳನ್ನು ಈ ಕಿಡಿಗೇಡಿಗಳು ಹಾನಿ ಮಾಡಿದ್ದು, ವಿಜಯನಗರ ಪೊಲೀಸರು ಇಬ್ಬರೂ ಬಾಲಾಪರಾಧಿಗಳನ್ನು ಬಂಧಿಸಿದ್ದಾರೆ. ವಿಜಯನಗರ ಸಮೀಪದ ಗೋವಿಂದರಾಜನಗರದಲ್ಲಿ ಬುಧವಾರ ರಾತ್ರಿ ಈ ಕೃತ್ಯ ನಡೆದಿದೆ.

ಬೈಕ್‌ನಲ್ಲಿ ಬಂದ ಕಿಡಿಗೇಡಿಗಳು ರಸ್ತೆಬದಿ ಮತ್ತು ಮನೆ ಮುಂದೆ ನಿಲ್ಲಿಸಿದ್ದ 6 ಕಾರು ಮತ್ತು 1 ಆಟೋ ಗಾಜಿಗೆ ರಾಡ್‌ನಿಂದ ಹೊಡೆದು ಹಾನಿ ಮಾಡಿದ್ದಾರೆ. ಈ ಕುರಿತು ವಾಹನ ಮಾಲೀಕ ಕೃಷ್ಣೋಜಿ ರಾವ್ ಎಂಬುವರು ದೂರು ನೀಡಿದ್ದರು. ಆ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ವಿಜಯನಗರ ಪೊಲೀಸರು, ಸಿಸಿ ಕ್ಯಾಮರಾ ದೃಶ್ಯಾವಳಿ ಮತ್ತು ಖಚಿತ ಸುಳಿವಿನ ಮೇರೆಗೆ ಬಾಲಾಪರಾಧಿಗಳನ್ನು ವಶಕ್ಕೆ ಪಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.