ಕುಮಟಾ: ತಾಲೂಕಿನ ಹೊಲನಗದ್ದೆ ವ್ಯಾಪ್ತಿಯ ಜನತಾ ಪ್ಲಾಟ್ ಎದುರಿಗೆ ಅಘನಾಶಿನಿ ಮುಖ್ಯರಸ್ತೆಯ ಮೇಲೆ ವ್ಯಾಪಿಸಿಕೊಂಡು ಜನವಸತಿ ಮೇಲೆ ಚಾಚಿಕೊಂಡಿರುವ ಬೃಹತ್ ಮರಗಳನ್ನು ಹಾಗೂ ಅಪಾಯಕಾರಿ ಟೊಂಗೆಗಳನ್ನು ತೆರವುಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಜನತಾ ಪ್ಲಾಟ್ ಎದುರು ಹಳೆಯದಾದ 2 ಬೃಹತ್ ಆಲದ ಮರಗಳಿವೆ. ಗಾಳಿ ಮಳೆಗೆ ಮುರಿದು ಬೀಳುವ ಆತಂಕವಿದೆ. ಕುಮಟಾ ಹಾಗೂ ಅಘನಾಶಿನಿವರೆಗೆ ಮೂರು ಪಂಚಾಯಿತಿ ಹಾಗೂ ಪಕ್ಕದ ತದಡಿ ಮೂಲಕ ಬರುವ ಜನರಿಗೂ ಬಹುಮುಖ್ಯ ಸಂಪರ್ಕ ಮಾರ್ಗವಾಗಿದೆ. ಈ ಮರಗಳ ಟೊಂಗೆ ಮನೆಗಳ ಮೇಲಿದೆ. ಸನಿಹದಲ್ಲೇ ಅಂಗನವಾಡಿ ಹಾಗೂ ಕಿರಿಯ ಪ್ರಾಥಮಿಕ ಶಾಲೆಯೂ ಇದೆ. ಹೀಗಾಗಿ ಮರದ ಸಣ್ಣ ಟೊಂಗೆ ಮುರಿದರೂ ಅಪಾಯವಿದೆ.
ಎರಡು ಬಾರಿ ಹೊಲನಗದ್ದೆ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಫೆ.21ರಂದು ತಾಲೂಕು ಕಾನೂನು ಸೇವಾ ಸಮಿತಿಗೆ ದೂರಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಗುಡ್ಡ ಕುಸಿತ ಘಟನೆಗಳಿಂದಾಗಿ ಇಲಾಖೆಗಳು ಇಂಥ ಅಪಾಯಗಳ ಬಗ್ಗೆಯೂ ಜಾಗೃತವಾಗಿರಬೇಕಿದೆ. ಕೂಡಲೇ ರಸ್ತೆ ಹಾಗೂ ಜನವಸತಿ ಪ್ರದೇಶದ ಮೇಲೆ ಅಪಾಯಕಾರಿಯಾಗಿರುವ ಇಂಥ ಹಳೆಯ ಮರಗಳನ್ನು ಸೂಕ್ತ ರೀತಿಯಲ್ಲಿ ತೆರವು ಗೊಳಿಸಬೇಕು ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಿಸ್, ಪ್ರಕಾಶ ಪಟಗಾರ, ವೆಂಕಟ್ರಮಣ ಪಟಗಾರ, ಪಾಂಡು ನಾಯ್ಕ, ಅಮೀನ್ ಸಯ್ಯದ್, ತ್ಯಾಗರಾಜ ಮುಕ್ರಿ, ಹಸನ್ ಜೂಕಾಕೋ, ಪಾಂಡು ನಾಯ್ಕ, ಸುಧಾಕರ ನಾಯ್ಕ ಆಗ್ರಹಿಸಿದ್ದಾರೆ.
ಜನತಾ ಪ್ಲಾಟ್ನಿಂದ ಹೊಲನಗದ್ದೆಯ ಮಾದರಿ ರಸ್ತೆಯವರೆಗೆ ಅಪಾಯಕಾರಿಯಾಗಿರುವ ಒಟ್ಟೂ 6 ಮರಗಳನ್ನು ತೆರವುಗೊಳಿಸಲು ಪಿಡಬ್ಲು್ಯಡಿಗೆ ಸೂಚಿಸಲಾಗಿದೆ. ಆದರೆ, ಮರ ತೆರವಿಗೆ ಹಣಕಾಸಿನ ಕೊರತೆಯ ಹಿನ್ನೆಲೆಯಲ್ಲಿ ಕಾರ್ಯ ಸಾಧ್ಯವಾಗುತ್ತಿಲ್ಲ ಎಂದು ಪಿಡಬ್ಲು್ಯಡಿಯಿಂದ ಪ್ರತಿಕ್ರಿಯೆ ದೊರೆತಿದೆ.| ನಾಗರಾಜ ನಾಯ್ಕ, ಹೊಲನಗದ್ದೆ ಪಿಡಿಒ