ಜಿಲ್ಲೆ

ಇಪ್ಪತ್ತು ವರ್ಷಗಳಿಂದಲೂ ಸೂರಿಗಾಗಿ ಅಲೆದಾಟ, ಪರಿಶಿಷ್ಟರಿಗೆ ಸಿಗದ ಮನೆ

ಚಿಕ್ಕಬಳ್ಳಾಪುರ: ಕ್ಷೇತ್ರದಲ್ಲಿ ಸೂರಿಲ್ಲದೇ ಗುಡಿಸಲು ಮನೆಯಲ್ಲಿರಬಾರದು, ಗುಡಿಸಲು ಮುಕ್ತ ತಾಲೂಕುನ್ನಾಗಿಸಲಾಗುತ್ತದೆ ಎಂಬುದಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭಾಷಣಗಳಲ್ಲಿ ಬೊಬ್ಬೆ ಹೊಡೆಯುತ್ತಿದ್ದಾರೆ. ಇದರ ನಡುವೆಯೂ ಗುಡಿಸಲಿನಲ್ಲಿ ವಾಸ ಮಾಡುವವರ ಸಂಖ್ಯೆ ತ್ವರಿತವಾಗಿ ಕಡಿಮೆಯಾಗುತ್ತಿಲ್ಲ. ಇದಕ್ಕೆ ಬಾಗೇಪಲ್ಲಿ ತಾಲೂಕಿನ ಗಿರಿಯಪ್ಪಲ್ಲಿನ ಪರಿಶಿಷ್ಟ ಜನಾಂಗಕ್ಕೆ ಸೇರಿದ ಕುಟುಂಬ ಒಂದು ನಿದರ್ಶನ. ಗ್ರಾಮದಲ್ಲಿ ಪರಿಶಿಷ್ಟ ಜನಾಂಗದ ಶ್ರೀನಿವಾಸ್ ಕಳೆದ 20 ವರ್ಷಗಳಿಂದಲೂ ಮನೆ ಮಂಜೂರಾತಿಗಾಗಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಸ್ಪಂದನೆ ಸಿಕ್ಕಿಲ್ಲ. ಸರ್ಕಾರದಿಂದ ಮಂಜೂರಾತಿ ಇಲ್ಲ ಎಂಬ ಉತ್ತರದಲ್ಲಿ ಕಾಲಹರಣ ಮಾಡಲಾಗುತ್ತಿದೆ. ಮತ್ತೊಂದೆಡೆ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಾಂಗಕ್ಕೆ ವಸತಿ ಯೋಜನೆಯಡಿ ಬೇಡಿಕೆಗೂ ಮೀರಿ ಮನೆಗಳನ್ನು ಮಂಜೂರು ಮಾಡಿರುವ ಅಂಕಿ ಅಂಶಗಳನ್ನು ಹೇಳುತ್ತಲೇ ಇದೆ. ಬಾಗೇಪಲ್ಲಿ ಕ್ಷೇತ್ರದಲ್ಲಿರುವ ಯಾವೊಬ್ಬ ಬಡವನೂ ಸರ್ಕಾರಿ ವಸತಿ ಯೋಜನೆಯಿಂದ ವಂಚಿತರಾಗಬಾರದು, ಮನೆ ಇಲ್ಲವೆಂದು ಅರ್ಜಿ ಸಲ್ಲಿಸಿದರೆ ತಕ್ಷಣವೇ ಮನೆ ಮಂಜೂರು ಮಾಡಿಕೊಡುತ್ತೇವೆ. ಬಡವರ ಸೇವೆಯೇ ನನ್ನ ಮುಖ್ಯ ಗುರಿ ಎಂದು ವೇದಿಕೆಯ ಭಾಷಣಗಳಲ್ಲಿ ಬೊಬ್ಬೆ ಹೊಡೆಯುವ ರಾಜಕಾರಣಿಗಳು, ಈಗಲಾದರೂ ಗಿರಿಯಪ್ಪಲ್ಲಿನ ಈ ಬಡಪಾಯಿ ಅಳಲನ್ನು ಕೇಳಿಸಿಕೊಳ್ಳಬೇಕಾಗಿದೆ.

  • ಕೂಲಿಯಿಂದ ಜೀವನ ನಡೆಸುತ್ತಿರುವ ನನಗೆ ಇದೀಗ 60 ವರ್ಷ. ಕಳೆದ 20 ವರ್ಷಗಳಿಂದಲೂ ಸರ್ಕಾರಿ ವಸತಿ ಯೋಜನೆಯಡಿ ಮನೆ ಮಂಜೂರಾತಿಗಾಗಿ ಕಾದು ನೋಡಲಾಗುತ್ತಿದೆ. ಆದರೆ, ಸರ್ಕಾರದಿಂದ ಇದುವರೆಗೂ ನಮ್ಮ ಕುಟುಂಬಕ್ಕೆ ಮನೆ ಮಂಜೂರು ಮಾಡಿಕೊಟ್ಟಿಲ್ಲ. ಮನೆಯಲ್ಲಿ ಆರು ಜನ ಇದ್ದು ವಾಸಕ್ಕೆ ಯೋಗ್ಯ ಇಲ್ಲದ ಕಿರಿದಾದ ಗುಡಿಸಲು ಮನೆಯಲ್ಲೇ ವಾಸಿಸುವಂತಾಗಿದೆ. ಇಂತಹ ದಯನೀಯ ಪರಿಸ್ಥಿತಿಯಲ್ಲಿದ್ದರೂ ಯಾರೊಬ್ಬರು ಕುಟುಂಬದ ನೆರವಿಗೆ ಬಂದಿಲ್ಲ.

ವೆಂಕಟಮ್ಮ, ಅರ್ಜಿದಾರ ಶ್ರೀನಿವಾಸ್ ತಾಯಿ, ಗಿರಿಯಪ್ಪಲ್ಲಿ