ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣೆ ಅಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಆಡಳಿತಗಾರ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪಾಲಿಕೆ ಕೇಂದ್ರ ಕಛೇರಿಯ ಆಡಳಿತಗಾರರ ಕಛೇರಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ವಿಪತ್ತು ನಿರ್ವಹಣೆ ಅಡಿ ನಡೆಯುತ್ತಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪುರ್ಣಗೊಳಿಸಬೇಕು. ಈ ಸಂಬಂಧ ಯೋಜನಾ ವಿಭಾಗದ ವಿಶೇಷ ಆಯುಕ್ತರಿಗೆ ಕಾಲ-ಕಾಲಕ್ಕೆ ಪರಿಶೀಲನಾ ಸಭೆ ನಡೆಸಲು ಸೂಚನೆ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 860 ಕಿ.ಮೀ ಉದ್ದದ ನೀರುಗಾಲುವೆ ಒಳಗೊಂಡಿದ್ದು, ಈ ಪೈಕಿ 173 ಕಿ.ಮೀ ಉದ್ದದ ಕಚ್ಚಾ ಡ್ರೈನ್‌ಗೆ ಆರ್.ಸಿ.ಸಿ ಗೋಡೆ ನಿರ್ಮಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ತ್ವರಿತವಾಗಿ ಪಕ್ಕಾ ಡ್ರೈನ್ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ವಿಶೇಷ ಆಯುಕ್ತರುಗಳಾದ ಮನೀಶ್ ಮೌದ್ಗಿಲ್, ಸುರಳ್ಕರ್ ವಿಕಾಸ್ ಕಿಶೋರ್, ಅವಿನಾಶ್ ಮೆನನ್ ರಾಜೇಂದ್ರನ್, ನವೀನ್ ಕುಮಾರ್ ರಾಜು ಹಾಗೂ ವಲಯ ಆಯುಕ್ತರುಗಳು, ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ನಗರದಲ್ಲಿ ಗುರುತಿಸಿರುವ 209 ಪ್ರವಾಹ ಪೀಡಿತ ಪ್ರದೇಶಗಳಿಗೆ ಸಂಬಂಧಿಸಿದಂತೆ, ಶಾಶ್ವತ ಪರಿಹಾರ ಸಿಕ್ಕಿರುವ ಪ್ರವಾಹ ಪೀಡಿತ ಪ್ರದೇಶಗಳಿಗೆ ವಲಯ ಆಯುಕ್ತರು ಪ್ರಮಾಣಿಕರಿಸಿ ವರದಿ ನೀಡಬೇಕು. ಸಮಸ್ಯೆ ಬಗೆಹರಿಸಬೇಕಿರುವ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪಂಪ್‌ಗಳ ವ್ಯವಸ್ಥೆ ಮಾಡುವುದರ ಜೊತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಮಳೆ, ಗಾಳಿ ನೆಲಕ್ಕುರುಳ ಸಾಧ್ಯತೆ ಇರುವ ಮರಗಳನ್ನು ಗುರುತಿಸಿ ಒಣಗಿದ ರೆಂಬೆಗಳನ್ನು ಕತ್ತರಿಸುವುದು ಅಥವಾ ಮರಗಳನ್ನು ತೆರವುಗೊಳಿಸುವ ತಂಡಗಳನ್ನು ಸಕ್ರಿಯಗೊಳಿಸಬೇಕು.
ಸಂಚಾರ ಪೊಲೀಸ್‌ರು ಗುರುತಿಸಿರುವ ರಸ್ತೆಯಲ್ಲಿ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ಎಲ್ಲಾ ವಲಯಗಳಲ್ಲೂ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ತುಷಾರ್ ಗಿರಿನಾಥ ಸೂಚಿಸಿದ್ದಾರೆ.
ನಗರದ 8 ವಲಯಗಳಲ್ಲಿಯೂ ಸರಿಯಾದ ಮೈಕ್ರೋ ಫ್ಲಾನ್ ಮಾಡಿಕೊಂಡು ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ಹಾಗೂ ರಸ್ತೆ ಬದಿಯ ಪಾದಚಾರಿ ಮಾರ್ಗಗಗಳಲ್ಲಿ ಬಹುತೇಕ ಕಡೆ ಮರದ ದಿಮ್ಮಿಗಳು, ಒಣಗಿರುವ ಕೊಂಬೆಗಳು ಹಾಗೆಯೇ ಬಿದ್ದಿದ್ದು, ಅವುಗಳನ್ನೆಲ್ಲಾ ಗುರುತಿಸಿ ತೆರವು ಕಾರ್ಯಾಚರಣೆ ನಡೆಸಬೇಕು. ಜೊತೆಗೆ ಪಾದಚಾರಿ ಮಾರ್ಗಗಳಲ್ಲಿ ನೆಟ್ಟಿರುವ ಸಸಿಗಳ ಸುತ್ತಲೂ ಗ್ರಿಲ್ ಅಳವಡಿಸಿ ಸಸಿ ಸುತ್ತಲೂ ಜೆಲ್ಲಿಕಲ್ಲು ಹಾಕಲು ಅರಣ್ಯ ವಿಭಾಗದ ಅಧಿಕಾರಿಗಳು ಗಮನಹರಿಸಬೇಕು.
ಸ್ವಚ್ಛ ಬೆಂಗಳೂರು ಅಭಿಯಾನದಡಿ ಘನತ್ಯಾಜ್ಯ ತೆರವಿಗಾಗಿ ಶೀಘ್ರ ಸಹಾಯವಾಣಿ ಸಂಖ್ಯೆಯನ್ನು ನೀಡಲು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚನೆ ನೀಡಿದರು.