ಜಿಲ್ಲೆ

ಸುರಂಗ ರಸ್ತೆ ಡಿಪಿಆರ್ ಪರಿಶೀಲನೆಗೆ ಚಾಲನೆ: ತಜ್ಞರ ಸಮಿತಿಯಲ್ಲಿ ತಾಂತ್ರಿಕ ಅಂಶದ ಚರ್ಚೆ

ಬೆಂಗಳೂರು: ಉದ್ದೇಶಿತ ಸುರಂಗ ರಸ್ತೆಗೆ ಸಿದ್ಧಪಡಿಸಿರುವ ವಿಸ್ತೃತ ಯೋಜನಾ ವರದಿ (ಡಿಪಿಆರ್) ಪರಿಶೀಲನೆಗೆ ನೇಮಕವಾಗಿರುವ ತಜ್ಞರ ಸಮಿತಿಯು ತಾಂತ್ರಿಕ ಅಂಶಗಳ ಬಗ್ಗೆ ಆರಂಭಿಕ ಚರ್ಚೆಗೆ ಚಾಲನೆ ನೀಡಿದೆ.

ಕಳೆದ ಫೆಬ್ರವರಿ ತಿಂಗಳಿನಲ್ಲೇ ಪಾಲಿಕೆ ಮುಖ್ಯ ಆಯುಕ್ತರು ಡಿಪಿಆರ್‌ಅನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಇದರಲ್ಲಿನ ತಾಂತ್ರಿಕ ಅಂಶಗಳ ಬಗ್ಗೆ ದೃಢಪಡಿಸಿಕೊಳ್ಳಲು ನಗರಾಭಿವೃದ್ಧಿ ಇಲಾಖೆಯ ತಾಂತ್ರಿಕ ಕೋಶದಲ್ಲಿ ನುರಿತ ತಜ್ಞರು ಇಲ್ಲ ಕಾರಣ ಪರಿಣಿತರು ಒಳಗೊಂಡಂತೆ ಬಿಎಂಆರ್‌ಸಿಎಲ್‌ನ ಕಾರ್ಯಕಾರಿ ನಿರ್ದೇಶಕ (ಸಿವಿಲ್) ಸಿದ್ದನಗೌಡ ಹೆಗ್ಗಾರೆಡ್ಡಿ ನೇತೃತ್ವದಲ್ಲಿ ಐವರ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಮೊದಲ ಸಭೆ ನಡೆಸಿ ಡಿಪಿಆರ್ ಸಿದ್ಧಪಡಿಸಿರುವ ಕಂಪನಿಯಿಂದ ಕೆಲವೊಂದು ಮಾಹಿತಿ ಸಲ್ಲಿಸಲು ಸೂಚಿಸಿದೆ.

ಸಮಿತಿಯು ಯೋಜನೆಯ ಸಮಗ್ರ ಮಾಹಿತಿಗಳನ್ನು ಪರಾಮರ್ಶಿಸಲಿದೆ. ಡಿಪಿಆರ್‌ನಲ್ಲಿ ಅನಗತ್ಯ ಅಥವಾ ವಾಸ್ತವಿಕವಲ್ಲದ ಅಂಶಗಳಿದ್ದಲ್ಲಿ ಅವುಗಳನ್ನು ಪರಿಶೀಲಿಸಲಿದೆ. ಒಂದು ವೇಳೆ ಪ್ರಮುಖ ಅಂಶಗಳು ಬಿಟ್ಟುಹೋಗಿದ್ದಲ್ಲಿ ಅಂತಹವುಗಳನ್ನು ಡಿಪಿಆರ್‌ಗೆ ಸೇರಿಸಲು ಶಿಾರಸು ಮಾಡಲಿದೆ. ಒಟ್ಟಾರೆ ಡಿಪಿಆರ್ ಅನುಮೋದನೆ ಬಳಿಕ ಯಾವುದೇ ಸಮಸ್ಯೆ ಉದ್ಭವವಾಗದಂತೆ ಮುನ್ನೆಚ್ಚರಿಕೆ ವಹಿಸಲು ಸಮಿತಿಗೆ ಸೂಚಿಸಲಾಗಿದೆ.

ತಾಂತ್ರಿಕ ಸಮಸ್ಯೆಗಳ ಬಗ್ಗೆ ಪರಾಮರ್ಶೆ:

ಉತ್ತರ-ದಕ್ಷಿಣ ಮಾರ್ಗವು ಹೆಬ್ಬಾಳದ ಕೆರೆಕೋಡಿಯಿಂದ ಆರಂಭಗೊಂಡು ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ 18.8 ಕಿ.ಮೀ. ದೂರ ಇರಲಿದೆ. ಯೋಜನೆ ಜಾರಿಗೆ 17,780 ಕೋಟಿ ರೂ. ಖರ್ಚಾಗುವುದೆಂದು ಅಂದಾಜಿಸಲಾಗಿದೆ. ಹಣವನ್ನು ಪಾಲಿಕೆ, ರಾಜ್ಯ ಸರ್ಕಾರ ಹಾಗೂ ಖಾಸಗಿ ಸಾಂಸ್ಥಿಕ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಅನುಷ್ಠಾನಿಸಲಾಗುತ್ತದೆ. ಹಣಕ್ಕೆ ಅಡ್ಡಿ ಆಗದಿದ್ದರೂ, ನೆಲದಾಳದಲ್ಲಿ ಸುರಂಗ ಮಾರ್ಗ ಹಾದುಹೋಗುವ ಕಾರಣ ತಾಂತ್ರಿಕ ಸಮಸ್ಯೆ ಎದುರಾಗದಂತೆ ಎರಡೆರಡು ಬಾರಿ ಪರಾಮರ್ಶೆಗೆ ಒಳಪಡಿಸಬೇಕು ಎಂಬುದು ನಗರಾಭಿವೃದ್ಧಿ ಇಲಾಖೆಯ ನಿಲುವುವಾಗಿದೆ. ಹಾಗಾಗಿ ಸಮಿತಿಗೆ ಪೂರ್ಣ ಅಧಿಕಾರ ನೀಡಿದ್ದು, ಎಲ್ಲ ದೃಷ್ಟಿಕೋನದಿಂದಲೂ ಪರಿಶೀಲನೆ ನಡೆಯಲಿದೆ. ಸಮಿತಿಯು ಮುಂದಿನ ತಿಂಗಳಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ತಿಳಿದುಬಂದಿದೆ.

ಸುರಂಗ ಕೊರೆಯುವಿಕೆಯೇ ಸವಾಲು:

ಟನಲ್ ರಸ್ತೆಯು ಭೂಮಿಯ 16 ಮೀ. ಕೆಳಗೆ ಹಾದುಹೋಗುವಂತೆ ಯೋಜನಾ ನಕ್ಷೆ ಸಿದ್ಧಪಡಿಸಲಾಗಿದೆ. ಭೂಮಿಯೊಳಗೆ ಟ್ವಿನ್ ಟನಲ್ ನಿರ್ಮಿಸುವುದರಿಂದ ಸುರಂಗ ಕೊರೆಯುವಿಕೆ ಪ್ರಮುಖ ಸವಾಲಾಗಲಿದೆ. ಮಾರ್ಗ ಹಾದುಹೋಗುವ ಜಾಗದಲ್ಲಿ ಅತಿ ಗಡುಸಿನ ಕಲ್ಲಿನ ಪದರವಿದ್ದು, ಅದನ್ನು ಕೊರೆಯಲು ಭಾರಿ ಯಂತ್ರಗಳು ಬೇಕಾಗುತ್ತದೆ. ಇವುಗಳನ್ನು ವಿದೇಶದಿಂದಲೇ ಆಮದು ಮಾಡಿಕೊಳ್ಳಬೇಕಿದ್ದು, ತಾಂತ್ರಿಕತೆ ಹಾಗೂ ನುರಿತ ಸಿಬ್ಬಂದಿ ಕೂಡ ಅಲ್ಲಿಂದಲೇ ಕರೆಯಿಸಬೇಕಾಗುತ್ತದೆ. ಜತೆಗೆ ಸುರಂಗ ಕೊರೆಯುವಿಕೆ ಮುನ್ನ ವಹಿಸಬೇಕಾದ ಮುನ್ನೆಚ್ಚರಿಕೆ ಅಂಶಗಳನ್ನು ಶೇ.100 ಪ್ರಮಾಣದಷ್ಟು ಪಾಲಿಸಬೇಕಾಗುತ್ತದೆ. ಕೊರೆದ ಮಣ್ಣು, ಕಲ್ಲನ್ನು ಹೊರಹಾಕುವುದು/ಸಾಗಣೆಗೆ ಸ್ಥಳ ಗುರುತು, ಎರಡು ಅಂತಸ್ತಿನ ರಸ್ತೆ ನಿರ್ಮಿಸಲು ನುರಿತ ಕಾರ್ಮಿಕ ವರ್ಗ, ಇಂಜಿನಿಯರ್‌ಗಳ ಅವಶ್ಯಕತೆ ಇದೆ. ಇವರ ನಿಯೋಜನೆ, ಸುರಕ್ಷಾತಾ ಕ್ರಮಗಳು, ಸುರಂಗ ಒಳಪ್ರವೇಶ/ನಿರ್ಗಮನದ ಸ್ಥಳದಲ್ಲಿ ಟ್ರಾಫಿಕ್, ಅವಘಡ ಸಂಭವಿಸಿದ್ದಲ್ಲಿ ಅಲ್ಲಿಗೆ ಆಂಬುಲೆನ್ಸ್ ತಲುಪುವುದು ಹೇಗೆ ? ಹಾಗೂ ಪ್ರಯಾಣಿಕರ ರಕ್ಷಣೆಗೆ ಅನುಸರಿಸಬೇಕಾದ ವಿಧಾನದ ಬಗ್ಗೆಯೂ ಡಿಪಿಆರ್ ಸಿದ್ಧಪಡಿಸಿರುವ ಕಂಪನಿಯಿಂದ ಮಾಹಿತಿಯನ್ನು ಕೋರಲಾಗಿದೆ.