ಜಿಲ್ಲೆ

ಬ್ಯಾಡಗಿ ಪಟ್ಟಣಕ್ಕೆ ತುಂಗಭದ್ರಾ ನದಿ ನೀರು: ಸರ್ಕಾರಕ್ಕೆ ಪ್ರಸ್ತಾವನೆ

ಬ್ಯಾಡಗಿ: ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ಹೊಸದಾಗಿ ಕುಡಿಯುವ ನೀರಿನ ಪೈಪ್​ಲೈನ್ ತರಲು ಕ್ರಿಯಾಯೋಜನೆ ಸಿದ್ಧಪಡಿಸಿ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ಇಲ್ಲಿನ ಕಲಾಭವನ ಬಳಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ವತಿಯಿಂದ 10 ಕೋ.ರೂ. ವೆಚ್ಚದ ರಾಜಕಾಲುವೆ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ರಾಣೆಬೆನ್ನೂರು ತಾಲೂಕಿನ ರಾಜನಹಳ್ಳಿ ಮಾಕನೂರು ಮಧ್ಯೆ ಚೆಕ್​ಡ್ಯಾಂ ನಿರ್ಮಾಣ ಕಾಮಗಾರಿ ಸಿವಿಲ್ ಹಂತ ಮುಗಿದಿದ್ದು, ತಾಂತ್ರಿಕ ಕಾಮಗಾರಿಗಳು ಮುಂದುವರಿದಿವೆ. ಅಲ್ಲಿ ಸುಮಾರು 2 ಟಿಎಂಸಿ ಅಧಿಕ ಪ್ರಮಾಣದಲ್ಲಿ ನೀರು ಸಂಗ್ರಹವಾಗಲಿದ್ದು, ರಾಣೆಬೆನ್ನೂರು ಹಾಗೂ ಬ್ಯಾಡಗಿ ನಗರಕ್ಕೆ ನಿರಂತರವಾಗಿ ಕುಡಿಯುವ ನೀರು ಪೂರೈಕೆಯಾಗಲಿದೆ. ಜನಸಂಖ್ಯೆಗೆ ತಕ್ಕಂತೆ ನೀರಿನ ಬಳಕೆ ಹೆಚ್ಚಾಗಿದ್ದು, ಹೊಸದಾಗಿ ಪೈಪ್​ಲೈನ್ ಕಾಮಗಾರಿ ಮಂಜೂರಾತಿಗೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ತಪ್ಪಲಿದೆ ಎಂದರು.

ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ಚೇರ್​ವುನ್ ಚಂದ್ರಪ್ಪ ಶೆಟ್ಟರ, ಸದಸ್ಯರಾದ ಬಸವರಾಜ ಛತ್ರದ, ಈರಣ್ಣ ಬಣಕಾರ, ಮೆಹಬೂಬ ಅಗಸನಹಳ್ಳಿ, ಶ್ರೀನಿವಾಸ ಕುರಕುಂದಿ, ಫಕೀರಮ್ಮ ಚಲವಾದಿ, ಮಲ್ಲಮ್ಮ ಪಾಟೀಲ, ಶಂಕರ ಕುಸಗೂರು, ಮಹ್ಮದ್​ರಫಿ ಮುದಗಲ್ಲ, ಹನುಮಂತಪ್ಪ ಮ್ಯಾಗೇರಿ, ಆಶ್ರಯ ಸಮಿತಿ ಅಧ್ಯಕ್ಷ ಮುನ್ನಾಫಲಿ ಎರೆಸೀಮೆ, ಸದಸ್ಯ ಗಿರೀಶ ಇಂಡಿಮಠ, ದುರ್ಗೆಶ ಗೋಣೆಮ್ಮನವರ, ಎ.ಎಸ್. ಸೌದಾಗರ, ದಾನಪ್ಪ ಚೂರಿ, ನಾಗರಾಜ ಆನ್ವೇರಿ, ಶಿವಪುತ್ರಪ್ಪ ಅಂಗಡಿ, ಡಿ.ಬಿ. ಬುಡ್ಡನಗೌಡ್ರ, ರವಿ ಪೂಜಾರ, ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಇತರರಿದ್ದರು.