ಜಿಲ್ಲೆ

ಅಪಾಯ ಮಟ್ಟ ಮೀರಿದ ತುಂಗಭದ್ರಾ

ವಿವೇಕಾನಂದ ದಾಸನಕೊಪ್ಪ

ಗುತ್ತಲ: ತುಂಗಾ ಹಾಗೂ ಭದ್ರಾ ಜಲಾಯಶಗಳಿಂದ ಹಾಗೂ ಮಳೆಯಿಂದಾಗಿ ಅಪಾರ ಪ್ರಮಾಣದ ನೀರು ಬಂದಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ.

ಕಳೆದ ಮೂರು ದಿನಗಳಿಂದ ಅಧಿಕ ಮಳೆ ಹಾಗೂ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟಿರುವ ಪರಿಣಾಮ ಗುರುವಾರ ತುಂಗಭದ್ರಾ ನದಿಯ ನೀರಿನ ಮಟ್ಟ ಸಂಜೆ 8.19 ಮೀಟರ್​ ದಾಖಲಾಗಿತ್ತು. ಬುಧವಾರ ಸಂಜೆ 6.83 ಮೀಟರ್​ ದಾಖಲಾಗಿತ್ತು. ಬುಧವಾರಕ್ಕೆ ಹೋಲಿಸಿದರೆ 1.36 ಮೀಟರ್​ ನೀರು ಅಧಿಕವಾಗಿ ಬಂದಿದೆ.

ಕಳೆದ ಮೂರು ದಿನಕ್ಕೆ ಹೋಲಿಸಿದರೆ ಸುಮಾರು 4 ಮೀಟರ್​ನಷ್ಟು ಅಧಿಕ ಪ್ರಮಾಣದಲ್ಲಿ ತುಂಗಭದ್ರಾ ನದಿಗೆ ನೀರು ಹರಿದ ಬಂದಿರುವ ಪರಿಣಾಮ ಅಕ್ಕಪಕ್ಕದ ಜಮೀನುಗಳು ನೀರಿನಿಂದ ಆವೃತವಾಗಿವೆ. ಮೆಕ್ಕೆಜೋಳ, ಮೆಣಸಿನಕಾಯಿ, ಸವತೆ, ಟೊಮ್ಯಾಟೋ, ಈರುಳ್ಳಿ, ಬೆಳ್ಳುಳ್ಳಿ, ಹೆಸರು, ಅಡಕೆ, ಕಬ್ಬು, ಭತ್ತದ ಬೆಳೆಗಳು ನೀರಿನಲ್ಲಿ ಮುಳುಗಿವೆ.

ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಪರಿಣಾಮ ತುಂಗಭದ್ರಾ ಹಾಗೂ ವರದಾ ನದಿಗಳ ಸಂಗಮ ಸ್ಥಳದ ಹತ್ತಿರವೇ ಇರುವ ಗುಯಿಲಗುಂದಿ ಗ್ರಾಮದ ಅನೇಕ ಜಮೀನುಗಳು ಈಗಾಗಲೇ ಜಲಾವೃತವಾಗಿವೆ. ಗುಯಿಲಗುಂದಿ-&ಮೇವುಂಡಿ ಮಾರ್ಗ ಮಧ್ಯ ಇರುವ ಹಳ್ಳವು ತುಂಬುವ ಹಂತಕ್ಕೆ ಬಂದಿದ್ದು, ಯಾವುದೇ ಸಮಯದಲ್ಲಿ ಈ ಮಾರ್ಗದ ಸಂಪರ್ಕ ಕಡಿತವಾಗಬಹುದು. ಬೆಳವಿಗಿ ಗ್ರಾಮದ ವರದಾ ಸೇತುವೆ ಮೇಲೆ ಕಳೆದ ಭಾನುವಾರದಿಂದ ಅಧಿಕ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಬೆಳವಿಗಿ-&ನೀರಲಗಿ ಸಂಪರ್ಕ ಕಡಿತವಾಗಿದೆ.

ನಿಧಾನವಾಗಿ ಹಾಲಗಿ-&ಮರೋಳ ಸೇತುವೆಯ ಮೇಲೆ ವರದಾ ನದಿ ಹರಿಯುವ ಸಾಧ್ಯತೆಗಳಿದೆ. ಒಂದು ವೇಳೆ ಈ ಸೇತುವೆ ಮೇಲೆ ನೀರು ಹರಿದರೆ ಗುತ್ತಲ ಹೋಬಳಿಯ ಹಾಲಗಿ, ಗುಡೂರು, ಗುಡಿಸಲುಕೊಪ್ಪ, ಕೆರೆಕೊಪ್ಪ, ನೀರಲಗಿ, ಗುಯಿಲಗುಂದಿ, ಮೇವುಂಡಿ ಹಾಗೂ ತೆರೆದಹಳ್ಳಿ ಗ್ರಾಮಗಳ ಸಂಪರ್ಕ ಕಡಿತವಾಗಲಿದೆ.

ತುಂಗಭದ್ರಾ ನದಿಯ ಅಬ್ಬರಕ್ಕೆ ಬೆಚ್ಚಿರುವ ವರದಾ ಮಂದಗತಿಯಲ್ಲಿ ತುಂಗಭದ್ರೆ ಸೇರುತ್ತಿರುವ ಪರಿಣಾಮ ವರದಾ ನದಿ ತಟಗಳ ಗ್ರಾಮಗಳ ಜಮೀನುಗಳು ಜಲಾವೃತವಾಗಿ ಅನೇಕ ಬೆಳೆಗಳಿಗೆ ಹಾನಿಯಾಗಿದೆ.