ಜಿಲ್ಲೆ

ತುಂಗಭದ್ರಾ ಸ್ನಾನ, ವೀರಭದ್ರನ ದರ್ಶನ

ಮುಂಡರಗಿ: ಮಕರ ಸಂಕ್ರಾಂತಿ ನಿಮಿತ್ತ ತಾಲೂಕಿನ ಸುಕ್ಷೇತ್ರ ಶಿಂಗಟಾಲೂರ ಶ್ರೀ ವೀರಭದ್ರೇಶ್ವರ ದೇವಸ್ಥಾನ ಎದುರಿನ ತುಂಗಭದ್ರಾ ನದಿಯಲ್ಲಿ ಗುರುವಾರ ಸಾವಿರಾರು ಭಕ್ತರು ಪುಣ್ಯಸ್ನಾನ ಮಾಡುವ ಮೂಲಕ ಸಂಭ್ರಮದಿಂದ ಹಬ್ಬ ಆಚರಿಸಿದರು.

ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಭಕ್ತ ಸಮೂಹ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ಕೊರ್ಲಹಳ್ಳಿ ಬಳಿಯ ಮದಲಗಟ್ಟ ಆಂಜನೇಯ ದೇವಸ್ಥಾನ ಮುಂಭಾಗದ ತುಂಗಭದ್ರಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ನಂತರ ಆಂಜನೇಯ ಸ್ವಾಮಿ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾದರು.

ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಶ್ರೀ ವೀರಭದ್ರೇಶ್ವರ ದೇವಸ್ಥಾನ, ಬಿದ್ರಳ್ಳಿಯ ರೇಣುಕಾದೇವಿ ದೇವಸ್ಥಾನ, ಗೊಮ್ಮಗೋಳದ ಶ್ರೀ ಗೋಣಿಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡರು. ನಂತರ ಮನೆ ಮಂದಿಯೆಲ್ಲ ಒಂದೆಡೆ ಕುಳಿತು ಎಳ್ಳುರೊಟ್ಟಿ, ಜೋಳದ ರೊಟ್ಟಿ, ಚಪಾತಿ, ಕೆಪ್ಪು ಚಟ್ನಿ, ಶೇಂಗಾ ಹೋಳಿಗೆ, ರವೆ ಉಂಡಿ, ಮೊಸರನ್ನ ಸೇರಿದಂತೆ ಬಗೆಯ ಸಹ ಭೋಜನ ಸವಿದರು.