ಚಳ್ಳಕೆರೆ: ತುಂಗಭದ್ರಾ ಹಿನ್ನೀರು ಯೋಜನೆ 2018ರಲ್ಲಿ ಆರಂಭಗೊಂಡಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿಳಂಬವಾಗುತ್ತಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಕುರುಡಿಹಳ್ಳಿ ಸಮೀಪದ ನೀರು ಸಂಗ್ರಹದ ಪಂಪ್‌ಹೌಸ್ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ್ದ ವೇಳೆ ಕುಡಿಯುವ ನೀರು ಮತ್ತು ಗ್ರಾಮೀಣ ನೈರ್ಮಲ್ಯ ಇಲಾಖೆ ಅಭಿಯಂತರರನ್ನು ಈ ವಿಷಯಲದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡರು.
ಕೂಡ್ಲಿಗಿ, ಮೊಳಕಾಲ್ಮೂರು, ಚಳ್ಳಕೆರೆ, ಪಾವಗಡ ತಾಲೂಕಿನ ಪ್ರತಿ ಗ್ರಾಮಗಳಿಗೆ ಕುಡಿಯುವ ನೀರಿನ ಉಪಯುಕ್ತ ಯೋಜನೆಗೆ 2230 ಕೋಟಿ ರೂ. ನಿಯೋಜನೆ ಮಾಡಲಾಗಿದೆ. ಅನುದಾನ ಮತ್ತು ಸಾಮಗ್ರಿಗಳ ವ್ಯವಸ್ಥೆ ಕಲ್ಪಿಸಿದ್ದರೂ ನಿಗದಿತ ಸಮಯಕ್ಕೆ ಕಾಮಗಾರಿ ಕಾರ್ಯ ಮುಗಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ 6 ತಿಂಗಳು ವಿಳಂಬ ಮಾಡಲಾಗಿದೆ. ಪ್ರತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯ ಶಾಸಕರು ಕಾಮಗಾರಿ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈಗಾಲದರೂ ಕಾಮಗಾರಿ ತ್ವರಿತಕ್ಕೆ ಮುಂದಾಗಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಭಾಗದಲ್ಲಿ ಕುರುಡಿಹಳ್ಳಿ, ನಲಗೇತನಹಟ್ಟಿ, ದುರ್ಗಾವರ, ಕ್ಯಾದಿಗುಂಟೆ,್ತ ಯಲಗಟ್ಟೆ ಗೊಲ್ಲರಹಟ್ಟಿ ಸಮೀಪ ನಿರ್ಮಾಣವಾಗುತ್ತಿರುವ 90 ಮತ್ತು 50 ಸಾವಿರ ಲೀಟರ್ ಸಾಮರ್ಥ್ಯದ ಪಂಪ್‌ಹೌಸ್ ಕಾಮಗಾರಿಗಳ ಪ್ರಗತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಸಚಿವರು, ಹೊಸಪೇಟೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು. ಅ ವೇಳೆಗೆ ನಿಗದಿತ ಕೆಲಸ ಮುಗಿಸಬೇಕು ಎಂದು ಹೇಳಿದರು.
ಜಿಲ್ಲಾ ಎಇಇ ಎನ್.ಪಾತಪ್ಪ, ತಾಲೂಕು ಎಇಇ ಕೆ.ಎಸ್. ದಯಾನಂದಸ್ವಾಮಿ, ಎನ್. ತಿಪ್ಪೇಸ್ವಾಮಿ, ಆರ್.ಕಾಂತರಾಜ್, ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಪಿ.ಜಯಪಾಲಯ್ಯ, ದಾವಣಗೆರೆ ವಿಭಾಗೀಯ ಅಧೀಕ್ಷಕ ಇಂಜಿನಿಯರ್ ಷಣ್ಮುಖ ವಿ.ಬುಗಟೆ, ರಾಜ್ಯ ವಿಭಾಗೀಯ ಚಂದ್ರಹಾಸ್‌ಇದ್ದರು.