ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ಹಿಂಗಾರಿ ಬೆಳೆಗಳಿಗೆ 2023 ಏ.10ವರೆಗೆ ಕಾಲುವೆಗಳಿಗೆ ನೀರು ಹರಿಸಲಾಗುವುದೆಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ , ಸಚಿವ ಆನಂದ್ ಸಿಂಗ್ ತಿಳಿಸಿದರು.
ತಾಲೂಕಿನ ಮುನಿರಾಬಾದ್ ಕಾಡಾ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 118 ನೇ ನೀರಾವರಿ ಸಲಹಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸದ್ಯ ಜಲಾಶಯದಲ್ಲಿ 94.749 ಟಿಎಂಸಿ ನೀರು ಸಂಗ್ರಹವಾಗಿದೆ. ಆವಿಯಾಗುವಿಕೆ, ಸಿಸ್ಟಂ ಲಾಸ್ ಮತ್ತು ಡೆಡ್ ಸ್ಟೋರೇಜ್ ಗೆ 7.828 ಟಿಎಂಸಿ ಕಾಯ್ದಿರಿಸಲಾಗಿದೆ. ರಾಜ್ಯದ ಪಾಲು 55.580 ಟಿಎಂಸಿ, ಆಂಧ್ರಕ್ಕೆ 33.396 ಟಿಎಂಸಿ, ತೆಲಂಗಾಣ ಕ್ಕೆ 5.773 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಪ್ರಸಕ್ತ ನೀರಾವರಿ ವರ್ಷದಲ್ಲಿ ಜಲಾಶಯ ಕ್ಕೆ 600 ಟಿಎಂಸಿ ನೀರು ಹರಿದು ಬಂದಿದೆ. ಇದರಲ್ಲಿ 439.643 ಟಿಎಂಸಿ ನದಿಗೆ ಹರಿದು ಹೋಗಿದೆ ಎಂದು ತಿಳಿಸಿದರು.
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಡಿ.1 ರಿಂದ 12 ರವರೆಗೆ ಸರಾಸರಿ 2 ಸಾವಿರ ಕ್ಯೂಸೆಕ್, ಡಿ.16 ರಿಂದ 31ರವರೆಗೆ 2500 ಕ್ಯೂಸೆಕ್, 2023 ಜ.1 ರಿಂದ ಮಾಚ್೯ 31 ರವರೆಗೆ 3500 ಕ್ಯೂಸೆಕ್ ನೀರು ಹರಿಸಲಾಗಿವುದು. ಕುಡಿಯುವ ನೀರಿಗಾಗಿ 2023 ಏ.1 ರಿಂದ 10 ರವರೆಗೆ 1484 ಕ್ಯೂಸೆಕ್, ಏ.11 ರಿಂದ ಮೇ 5 ರವರೆಗೆ 100 ಕ್ಯೂಸೆಕ್ ನಂತೆ ವಿಜಯನಗರ ಎಡದಂಡೆ ಕಾಲುವೆಗಳಿಗೆ ನೀರು ಹರಿಸಲಾಗುವುದು ಎಂದರು.
ತುಂಗಭದ್ರಾ ಬಲದಂಡೆಯ ಮೇಲ್ಮಟ್ಟದ ಕಾಲುವೆಗೆ ಡಿ.1 ರಿಂದ 10 ರವರೆಗೆ ನೀರು ನಿಲುಗಡೆ ಮಾಡಲಾಗುವುದು. ಡಿ.11 ರಿಂದ 31 ರವರೆಗೆ 900 ಕ್ಯೂಸೆಕ್ ನಂತೆ, 2023 ಜ.1 ರಿಂದ 10ರವರೆಗೆ ನೀರು ನಿಲುಗಡೆ, ಜ.11 ರಿಂದ 31 ರವರೆಗೆ 900 ಕ್ಯೂಸೆಕ್ ನೀರು ಹರಿಸಲಾಗುವುದು. ತುಂಗಭದ್ರಾ ಬಲದಂಡೆಯ ಕೆಳಮಟ್ಟದ ಕಾಲುವೆಗೆ ಡಿ.1 ರಿಂದ 15 ರವರೆಗೆ 400 ಕ್ಯೂಸೆಕ್, ಡಿ.16 ರಿಂದ 31 ರವರೆಗೆ 550 ಕ್ಯೂಸೆಕ್, 2023 ಜ.1 ರಿಂದ 31 ರವರೆಗೆ 700 ಕ್ಯೂಸೆಕ್, ಫೆ. 1 ರಿಂದ 28 ರವರೆಗೆ 650 ಕ್ಯೂಸೆಕ್, ಮಾಚ್೯ 1 ರಿಂದ 31 ರವರೆಗೆ 700 ಕ್ಯೂಸೆಕ್, ಏ. 1 ರಿಂದ 5 ರವರೆಗೆ 500 ಕ್ಯೂಸೆಕ್ ( ಕುಡಿಯುವ ನೀರು ಒಳಗೊಂಡಂತೆ) ಹರಿಸಲಾಗುವುದು.
ತುರ್ತಾ ಕಾಲುವೆಗೆ ಗುಂಡ್ಲು ಕೆರೆ ಎಸ್ಕೆಪ್ ನಿಂದ ಲಭ್ಯತೆ ಅನುಸಾರ ನೀರು ಹರಿಸಲಾಗುವುದು. ರಾಯ ಬಸವಣ್ಣ ಕಾಲುವೆಗೆ 2023 ಜ.16 ರಿಂದ ಮೇ 31 ರವರೆಗೆ 280 ಕ್ಯೂಸೆಕ್, ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಡಿ.1 ರಿಂದ 25 ಕ್ಯೂಸೆಕ್ ನಂತೆ ನೀರು ಲಭ್ಯತೆ ಇರುವವರೆಗೆ ಹರಿಸಲಾಗುವುದು ಎಂದರು. ಸಂಸದರಾದ ಸಂಗಣ್ಣ ಕರಡಿ, ದೇವೇಂದ್ರಪ್ಪ ನಾಲ್ಕು ಜಿಲ್ಲೆಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ರೈತರಿದ್ದರು.