ನ್ಯಾಮತಿ: ತಾಲೂಕಿನ ಬಸವನಹಳ್ಳಿ ಗ್ರಾಮದ ಮೂಲಕ ಹಾದು ಹೋಗಿರುವ ತುಂಗಾ ಮೇಲ್ದಂಡೆ ನಾಲೆ ಭಾನುವಾರ ಒಡೆದು ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ.
ಅಡಕೆ, ಹತ್ತಿ, ಮೆಕ್ಕೆಜೋಳ, ಭತ್ತ ಸೇರಿ ನೂರಾರು ಎಕರೆ ಬೆಳೆ ಜಲಾವೃತವಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಳಲೂರು ಹಾಗೂ ನ್ಯಾಮತಿ ತಾಲೂಕಿನ ಗಂಗನಕೋಟೆ ಸಮೀಪ ನಾಲೆ ನೀರನ್ನು ಹಳ್ಳಕ್ಕೆ ತಿರುಗಿಸಿದ್ದರಿಂದ ಹೀಗಾಗಿದೆ ಎಂದು ಹೇಳಲಾಗಿದೆ.
ತುಂಗಾ ಮೇಲ್ದಂಡೆ ಯೋಜನೆಯ ಇಇ ಕೃಷ್ಣಮೂರ್ತಿ, ಎಇಇ ಮಂಜುನಾಥ್ ಸ್ಥಳದಲ್ಲಿದ್ದು ನೀರು ನಿಲ್ಲಿಸುವುದಕ್ಕೆ ಅಗತ್ಯ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ನ್ಯಾಮತಿ ತಹಸೀಲ್ದಾರ್ ಎಚ್.ಬಿ.ಗೋವಿಂದಪ್ಪ, ರಾಜಸ್ವ ನಿರೀಕ್ಷಕ ಸಂತೋಷ್ ಭೇಟಿ ನೀಡಿ, ರೈತರಿಗೆ ನಿಯಮಾವಳಿ ಪ್ರಕಾರ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ನೀರಿನ ಹರಿವು ನಿಂತ ಬಳಿಕ ನಾಲೆ ದುರಸ್ತಿ: ಬಸವನಹಳ್ಳಿ ಸಮೀಪದ ತುಂಗನಾಲೆ ಒಡೆದ ಸ್ಥಳಕ್ಕೆ ಶಾಸಕ ಡಿ.ಜಿ.ಶಾಂತನಗೌಡ ಭೇಟಿ ನೀಡಿ, ಪರಿಶೀಲಿಸಿದರು.
ಬಳಿಕ ಮಾತನಾಡಿ, ನೀರು ನಿಲ್ಲಿಸಲು ಅಗತ್ಯ ಕ್ರಮ ಕೈಗೊಂಡು ಮುಂಗಾರು ಬೆಳೆಗೆ ಸಮಸ್ಯೆ ಆಗದಂತೆ ನೀರು ಬಿಡುವ ವ್ಯವಸ್ಥೆ ಮಾಡಲಾಗುವುದು.
ನೀರಿನ ಹರಿವು ನಿಂತ ನಂತರ ಆಧುನಿಕ ತಂತ್ರಜ್ಞಾನ ಬಳಸಿ ವಾರದೊಳಗೆ ನಾಲೆ ದುರಸ್ತಿ ಮಾಡಲಾಗುವುದು ಎಂದರು.
ಬೆಳೆ ನಷ್ಟ ಪರಿಶೀಲಿಸಿ ವರದಿ ನೀಡುವಂತೆ ಸಂಬಂಧಿತ ಇಲಾಖೆಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಾಜಿ ಸಚಿವರ ಭೇಟಿ: ನಾಲೆ ಒಡೆದ ಸ್ಥಳಕ್ಕೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿ, ವೀಕ್ಷಿಸಿದರು. ಅಡಕೆ, ಭತ್ತ, ಮೆಕ್ಕೆಜೋಳ ಹಾಗೂ ಹತ್ತಿ ಬೆಳೆ ಜಲಾವೃತವಾಗಿದೆ. ರೈತರಿಗೆ ಪರಿಹಾರ ನೀಡುವ ಮೂಲಕ ನಷ್ಟ ಭರಿಸಬೇಕು ಎಂದರು.