ಜಿಲ್ಲೆ

65 ವರ್ಷಗಳಿಂದ ದುರಸ್ತಿ ಕಾಣದ ತುಂಗಾ ಸೇತುವೆ

ಜಿ.ಹೆಚ್. ಧನ್ಯಕುಮಾರ್

ಶೃಂಗೇರಿ: ಶೃಂಗೇರಿ, ಜಯಪುರ, ಚಿಕ್ಕಮಗಳೂರು ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಮೆಣಸೆ ಸಮೀಪ ಇರುವ ತುಂಗಾನದಿ ಸೇತುವೆ ತನ್ನ ಅಸ್ತಿತ್ವ ಕಳೆದು ಕೊಂಡು ಹಂತ ಹಂತವಾಗಿಕುಸಿಯುತ್ತಿದೆ. ಸೇತುವೆ ಕುಸಿದು ಅನಾಹುತ ಸಂಭವಿಸುವ ಮುನ್ನಾ ಸೇತುವೆಯನ್ನು ದುರಸ್ತಿ ಮಾಡಬೇಕಿದೆ.

ಈ ಸೇತುವೆ ಪ್ರಮುಖ ನಗರಗಳಿಗೆ ಸಂಪರ್ಕ ಸಾಧಿಸುವ ಸೇತುವೆಯಾಗಿದ್ದು, ಹೊರನಾಡು, ಬಾಳೆಹೊನ್ನೂರು, ಮೂಡಿಗೆರೆ, ಚಿಕ್ಕಮಗಳೂರು, ಹಾಸನ, ಬೆಂಗಳೂರು, ಮೈಸೂರು ಸೇರಿದಂತೆ ಪ್ರಮುಖ ನಗರಗಳಿಗೆ ಸಂಪರ್ಕಿಸುತ್ತದೆ. ತುಂಗಾ ಸೇತುವೆಯಲ್ಲಿ ಇರುವ ರಸ್ತೆ ಶೃಂಗೇರಿ ಶಾರದಾಪೀಠಕ್ಕೆ ತೆರಳಲು ಕೂಡಾ ಪ್ರಮುಖ ಸಂಪರ್ಕದ ಕೊಂಡಿಯಾಗಿದೆ. 1956ರಲ್ಲಿ ಆಗಿನ ಮೈಸೂರು ಸಂಸ್ಥಾನದ ಮುಖ್ಯಮಂತ್ರಿ ಕಡಿದಾಳು ಮಂಜಪ್ಪ ತುಂಗಾ ಸೇತುವೆಯ ಶಂಕುಸ್ಥಾಪನೆ ನೆರವೇರಿಸಿದರು. 1960ರಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಚೆನ್ನಬಸಪ್ಪ ಸೇತುವೆ ಉದ್ಘಾಟಿಸಿದರು. ಸೇತುವೆ ಸುಮಾರು 356 ಅಡಿ ಉದ್ದವಿದೆ. ಪ್ರವಾಹದ ಮೇಳೆ 59,500 ಕ್ಯೂಸೆಕ್ ನೀರಿನ ಹರಿವು ಇದೆ ಎಂದು ಅಂದಾಜಿಸಲಾಗಿದೆ.

1960ರಲ್ಲಿ ಸ್ಥಾಪನೆಗೊಂಡ ಸೇತುವೆ ನಿರ್ವಹಣೆಗೆ ಗರ ಬಡಿದಿದೆ. ಸುಣ್ಣ ಬಣ್ಣವಿರಲಿ..ದುರಸ್ತಿಯನ್ನು ಕಾಣದಂತಾಗಿದೆ. ತುಂಗಾ ಸೇತುವೆಯನ್ನು ಸುಸ್ಥಿತಿಗೆ ತರಲು ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ಹಾಗೂ ಸರ್ಕಾರ ಹೆಚ್ಚಿನ ಕಾಳಜಿ ವಹಿಸಬೇಕಿದೆ.