ಜಿಲ್ಲೆ

ಶಿರಾ ನಗರಸಭೆ ಜೆಡಿಎಸ್ ಸದಸ್ಯನ ಆಯ್ಕೆಯೇ ಅಸಿಂಧು

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಚುನಾವಣೆ ವೇಳೆ ನಿಯಮಾವಳಿಗಳ ಅಡಿ ಚುನಾವಣಾ ಆಯೋಗಕ್ಕೆ ಸ್ಪಷ್ಟ ಮಾಹಿತಿ ನೀಡದ ಕಾರಣಕ್ಕೆ ಅಭ್ಯರ್ಥಿಯೊಬ್ಬರ ಆಯ್ಕೆಯನ್ನು ಅಸಿಂಧುಗೊಳಿಸಿ ಶಿರಾ ನ್ಯಾಯಾಲಯ ಇತ್ತೀಚೆಗೆ ಆದೇಶ ಹೊರಡಿಸಿದೆ.

2021ರಲ್ಲಿ ನಡೆದಿದ್ದ ಶಿರಾ ನಗರಸಭೆ ಚುನಾವಣೆ ವೇಳೆ 9ನೇ ವಾರ್ಡ್ ನಿಂದ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ರವಿಶಂಕರ್ ಆಯ್ಕೆಯನ್ನು ಅಸಿಂಧುಗೊಳಿಸಲಾಗಿದೆ.

ನಾಮಪತ್ರ ಸಲ್ಲಿಕೆ ವೇಳೆ ಕೆಲವೊಂದು ಮಾಹಿತಿ ಮುಚ್ಚಿಟ್ಟು ಅಕ್ರಮವಾಗಿ ಆಯ್ಕೆಗೊಂಡಿದ್ದು ಅವರನ್ನು ಅನೂರ್ಜಿತಗೊಳಿಸಬೇಕೆಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ನ್ಯಾಯಾಲಯದ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ ಶಿರಾ ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಗೀತಾಂಜಲಿ ಅವರು ಅಭ್ಯರ್ಥಿಯ ಆಯ್ಕೆಯನ್ನು ಅಸಿಂಧು ಗೊಳಿಸಿ ಆದೇಶಿಸಿದ್ದಾರೆ.

ಚುನಾವಣೆ ವೇಳೆ ಸಲ್ಲಿಸಲಾಗಿದ್ದ ಪ್ರಮಾಣ ಪತ್ರದಲ್ಲಿ ತಮ್ಮ ಮೇಲಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ಮುಚ್ಚಿಡಲಾಗಿತ್ತು. ಆಸ್ತಿ ವಿವರಗಳನ್ನು ಸರಿಯಾಗಿ ನಮೂದಿಸದೆ ಇರುವುದು, ಆದಾಯದ ಮಾಹಿತಿ ಸೇರಿದಂತೆ ಹಲವು ಅಂಶಗಳು ತಾಳೆಯಾಗದೆ ಇರುವುದೇ ಅಭ್ಯರ್ಥಿಯ ಆಯ್ಕೆಯನ್ನು ಅಸಿಂಧುಗೊಳಿಸಲು ಕಾರಣವಾಗಿದೆ.