ತುಮಕೂರು: ತುಮಕೂರು ಮಹಾನಗರ ಪಾಲಿಕೆ ನಲ್ಮ್ ವಿಭಾಗದಲ್ಲಿನ ಭ್ರಷ್ಟಾಚಾರದ ಕರ್ಮಕಾಂಡ ಬೀದಿಗೆ ಬಿದ್ದಿದೆ. ಗುತ್ತಿಗೆ ಸಿಬ್ಬಂದಿ ದೀಪಿಕಾ ಹಾಗೂ ಪಾಲಿಕೆಯಲ್ಲಿರುವ ಮಧ್ಯವರ್ತಿಗಳು ಸೇರಿಕೊಂಡು ಪತ್ರಿಕೆಯೊಂದರ ಸಂಪಾದಕನಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ.
ಸಂಘ, ಸಂಸ್ಥೆಗಳಿಗೆ 10 ಲಕ್ಷ ರೂ. ಸಾಲ ಸೌಲಭ್ಯ ಮಾಡಿಕೊಡಲು 4 ಲಕ್ಷ ರೂ.ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾದ ನಲ್ಮ್ ವಿಭಾಗದ ಸಿಬ್ಬಂದಿ ದೀಪಿಕಾ ಪ್ರಶ್ನಿಸಲು ಹೋಗಿದ್ದ ಪತ್ರಿಕೆಯೊಂದರ ಸಂಪಾದಕನಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಆದರೆ, ಪತ್ರಕರ್ತರ ಸೋಗಿನಲ್ಲಿ ಬೆದರಿಸಿ, ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಸಿಬ್ಬಂದಿ ಆರೋಪಿಸಿದ್ದಾರೆ.
ನಲ್ಮ್ ವಿಭಾಗದ ಮಹಿಳಾ ಸಿಬ್ಬಂದಿಯರು ಹಾಗೂ ಲಂಚ ವ್ಯವಹಾರದಲ್ಲಿ ಮಧ್ಯವರ್ತಿಗಳಾಗಿರುವ ಕೆಲವರು ಸೇರಿಕೊಂಡು ಸತ್ಯವಿಸ್ಮಯ ವಾರಪತ್ರಿಕೆ ಸಂಪಾದಕ ಎನ್ನಲಾದ ಪಾವಗಡ ಪ್ರದೀಪ್ ಎಂಬುವವ ಮೇಲೆ ಹಲ್ಲೆ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪತ್ರಕರ್ತರು ಎಂದು ಹೇಳಿಕೊಂಡು ಬಂದ ಪಾವಗಡ ಪ್ರದೀಪ್ ಹಾಗೂ ಇಬ್ಬರು ಯುವತಿಯರು ಮೂವರೂ ಹಣಕ್ಕಾಗಿ ಪೀಡಿಸಿದರು ಎಂದು ನಲ್ಮ್ ವಿಭಾಗದಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ಆರೋಪಿಸಿದ್ದಾರೆ.