ತುಮಕೂರು: ದೇವರಾಯನದುರ್ಗ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಅವೈಜ್ಞಾನಿಕವಾಗಿ ತಂತಿ ಬೇಲಿ ನಿರ್ಮಾಣ ಮಾಡಲು ಮುಂದಾಗಿರುವುದು ಜೀವವೈವಿಧ್ಯಕ್ಕೆ ಕಂಟಕವಾಗುವ ಅಪಾಯವಿದೆ.
ಕಾಂಕ್ರಿಟ್ ಕಂಬಗಳನ್ನು ನೆಟ್ಟು ವನ್ಯಜೀವಿಗಳ ಸ್ವಚ್ಚಂದ ಓಡಾಟಕ್ಕೆ ಅಡಚಣೆ ಉಂಟುಮಾಡುತ್ತಿರುವ ಬಗ್ಗೆ ಪರಿಸರ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದು ಕೂಡಲೇ ಕಾಮಗಾರಿ ನಿಲ್ಲಿಸಿ ವನ್ಯಜೀವಿಗಳನ್ನು ರಕ್ಷಿಸಿ ಎಂದು ಆಗ್ರಹಿಸಿದ್ದಾರೆ.
ದೇವರಾಯನದುರ್ಗ ಅರಣ್ಯದ ನಾಮದ ಚಿಲುಮೆ ಸುತ್ತಮುತ್ತಲ ಅರಣ್ಯದ ಮಧ್ಯಭಾಗದಲ್ಲಿ ಸುಮಾರು ನಾಲ್ಕು ಕಿಮೀ ಉದ್ದದವರೆಗೆ ಸಿಮೆಂಟ್ ಕಂಬ ನೆಟ್ಟು ತಂತಿಬೇಲಿ ನಿರ್ಮಾಣ ಮಾಡಲು ಸಿದ್ದತೆ ನಡೆಸಲಾಗುತ್ತಿರುವುದು ವಿವಾದ ಸೃಷ್ಠಿಸಿದೆ.
ಅಪಾರ ಪ್ರಮಾಣದ ಮರಗಿಡಗಳು, ಬಳ್ಳಿಗಳು, ಮೂಲಿಕೆಗಳು ನಾಲ್ಕು ಕಿಮೀ ಉದ್ದಕ್ಕೂ ನಾಶವಾಗಿವೆ ಇದಲ್ಲದೆ ಈ ಅರಣ್ಯದಲ್ಲಿರುವ ಕರಡಿ, ಚಿರತೆ, ಜಿಂಕೆ, ಕಾಡು ಹಂದಿ, ಕಾಡು ಬೆಕ್ಕು, ಕಡವೆ ಯಂತಹ ಸಸ್ತನಿ ಪ್ರಾಣಿಗಳ ಸ್ವಚ್ಚಂದ ಓಡಾಟ ಹಾಗೂ ಅವುಗಳ ದೈನಂದಿನ ಆಹಾರ ಮತ್ತು ನೀರನ್ನು ಹರಸಿ ಓಡಾಟದ ಖಾಸಗಿ ಜೀವನಕ್ರಮಕ್ಕೆ ಅಡ್ಡಿಯಾಗಲಿದೆ.