ಜಿಲ್ಲೆ

ಕಾಂಗ್ರೆಸ್‌ನ ಪ್ರಜಾಧ್ವನಿಗೆ ಉಸಿರೇ ಇಲ್ಲದಾಗಿದೆ; ಡಿ.ವಿ.ಸದಾನಂದಗೌಡ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಅಧಿಕಾರದ ಆಸೆಯ ಬೆನ್ನೇರಿ ಹೊರಟಿರುವ ಜೆಡಿಎಸ್‌ನ ಪಂಚರತ್ನ ಯಾತ್ರೆ ಪಂಚರ್ ಆಗಿದೆ. ಇನ್ನೂ ಕಾಂಗ್ರೆಸ್‌ನ ಪ್ರಜಾಧ್ವನಿಗೆ ಉಸಿರೇ ಇಲ್ಲದಾಗಿದ್ದು ಆ ಪಕ್ಷದಲ್ಲೇ ಭಿನ್ನ ಧ್ವನಿಗಳಿವೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಲೇವಡಿ ಮಾಡಿದರು.

ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೊನ್ನುಡಿಕೆ ಹಾಗೂ ಹೆಬ್ಬೂರು ಜಿಲ್ಲಾ ಪಂಚಾಯಿತಿ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಧ್ವನಿ ಎಂದು ಹೇಳುವ ಕಾಂಗ್ರೆಸ್ಸಿಗರಲ್ಲೇ ಭಿನ್ನ ಧ್ವನಿ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರದ್ದು ಒಂದು ಧ್ವನಿ, ಸಿದ್ದರಾಮಯ್ಯ ಅವರದ್ದು ಒಂದು ಧ್ವನಿ. ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರದ್ದು ಒಂದು ಧ್ವನಿ ಎಂದು ಛೇಡಿಸಿದರು.

ಧರ್ಮ ಸಂಸ್ಥಾಪನಾರ್ಥವಾಗಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಯಾಗವನ್ನು ಹಮ್ಮಿಕೊಳ್ಳಲಾಗಿದೆ. ಅಶ್ವಮೇಧಯಾಗಕ್ಕೆ ಸುರೇಶಗೌಡ ಎಂಬ ಕುದುರೆಯನ್ನು ಬಿಟ್ಟಿರುವೆ. ವಿರೋಧ ಪಕ್ಷಗಳಿಗೆ ತಾಕತ್ತು ಇದ್ದರೆ ಈ ಕುದುರೆಯನ್ನು ಕಟ್ಟಿ ಹಾಕಿ ಎಂದು ಸವಾಲು ಹಾಕಿದರು.

ಹಾಲಿ ಜೆಡಿಎಸ್ ಶಾಸಕರು ಕೇಂದ್ರದಿಂದ ಬಿಡುಗಡೆಯಾದ 10 ಕೋಟಿ ರೂ.,ಗಳ ಅಭಿವೃದ್ಧಿ ಕಾಮಗಾರಿಯಲ್ಲಿ ಗುತ್ತಿಗೆದಾರರು ಕಮಿಷನ್ ನೀಡಿಲ್ಲ ಎಂಬ ಕಾರಣಕ್ಕೆ ಕೆಲಸ ಮಾಡಲೇ ಬಿಟ್ಟಿಲ್ಲ. ಇಂತಹ ಶಾಸಕರ ಅಗತ್ಯ ಕ್ಷೇತ್ರಕ್ಕೆ ಇದೆಯೇ ಎಂಬುದನ್ನು ಮತದಾರರು ತೀರ್ಮಾನಿಸಬೇಕು ಎಂದು ಸದಾನಂದಗೌಡ ಪ್ರಶ್ನಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್, ಮಾಜಿ ಶಾಸಕ ಬಿ.ಸುರೇಶಗೌಡ, ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್. ಶಿವಪ್ರಸಾದ್, ಜಿಪಂ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಮಂಡಲ ಅಧ್ಯಕ್ಷ ಶಂಕರ್, ಯುವ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಅರಕೆರೆ ರವೀಶ್, ಮತ್ತಿತರರು ಇದ್ದರು.