ತುಮಕೂರು: ಮಳೆ ಆರ್ಭಟದಿಂದ ತುಮಕೂರಿಗರು ತತ್ತರಿಸಿದ್ದಾರೆ. ಚಿಕ್ಕಪೇಟೆ ಗಾರ್ಡನ್ ರಸ್ತೆಯ ಸ್ಮಶಾನದ ಮುಂಭಾಗ ಅರ್ಧಕ್ಕೆ ನಿಂತಿರುವ ದೊಡ್ಡ ಚರಂಡಿ (ರಾಯಗಾಲುವೆ) ಕಾಮಗಾರಿಯಿಂದ ಸ್ಮಶಾನಕ್ಕೆ ತೆರಳುವ ರಸ್ತೆ ಸೇರಿ ಸುತ್ತಮುತ್ತಲಿನ ಪ್ರದೇಶ ಜಲಾವೃತವಾಗಿದ್ದು, ಶವಸಂಸ್ಕಾರಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗಾರ್ಡನ್ ರಸ್ತೆಯ ಶನಿಮಹಾತ್ಮ ದೇವಾಲಯದ ಅಕ್ಕಪಕ್ಕದ ನಿವಾಸಿಗಳು ಮಳೆ ನೀರು, ಚರಂಡಿ ನೀರಿನ ಜತೆಗೆ ಸೇರಿ ಕಲುಷಿತಗೊಂಡಿದ್ದು, ಯಾತನೆ ಅನುಭವಿಸುವಂತಾಗಿದೆ. ರಸ್ತೆ ಜಲಾವೃತಗೊಂಡಿರುವುದರಿಂದ 3 - 4 ದಿನಗಳಿಂದ ಶವಸಂಸ್ಕಾರಕ್ಕೂ ಪರದಾಡುವಂತಾಗಿದೆ.
ಸ್ಪಂದಿಸದ ಪಾಲಿಕೆ ಅಧಿಕಾರಿಗಳು: ಸಮಸ್ಯೆ ಇತ್ಯರ್ಥಪಡಿಸುವಂತೆ ಮಹಾನಗರ ಪಾಲಿಕೆಗೆ ಹಲವು ಬಾರಿ ಈ ಭಾಗದ ನಿವಾಸಿಗಳು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಗಾರ್ಡನ್ ರಸ್ತೆಯ ನೊಂದ ರೈತರು ಹಾಗೂ ನಾಗರಿಕರ ಹೋರಾಟ ಸಮಿತಿ ನಿಯೋಗವು ಸಮಸ್ಯೆಯನ್ನು ಇತ್ಯರ್ಥಪಡಿಸಲು ಜಿಲ್ಲಾಡಳಿತ ತಕ್ಷಣವೇ ಮಧ್ಯಪ್ರವೇಶಿಸುವಂತೆ ಗುರುವಾರ ಮನವಿ ನೀಡಿದೆ. ನಿಯೋಗದಲ್ಲಿ ಹೋರಾಟ ಸಮಿತಿ ಸಂಚಾಲಕರಾದ ಎಚ್.ರಾಮು, ಎಸ್.ರಾಘವೇಂದ್ರ, ಸಿಪಿಐ ಜಿಲ್ಲಾಕಾರ್ಯದರ್ಶಿ ಗಿರೀಶ್, ಹೋರಾಟ ಸಮಿತಿಯ ಟಿ. ಗೋವಿಂದರಾಜು, ಗವಿರಾಜು, ಗಂಗಣ್ಣ ಇದ್ದರು.
ಗಾರ್ಡನ್ ರಸ್ತೆಯ ಸ್ಮಶಾನದ ಮುಂಭಾಗ ಅರ್ಧಕ್ಕೆ ನಿಂತಿರುವ ದೊಡ್ಡ ಚರಂಡಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಜಿಲ್ಲಾಡಳಿತ ಅನುಕೂಲ ಮಾಡಿಕೊಡಬೇಕು.
| ಟಿ.ಎಚ್.ರಾಮು ಹೋರಾಟ ಸಮಿತಿ ಸಂಚಾಲಕ
ಸಾರ್ವಜನಿಕ ಸ್ಮಶಾನವು ಕೊಳಚೆ ನೀರಿನಿಂದ ತುಂಬಿ ಶವಸಂಸ್ಕಾರಕ್ಕೆ ತೊಂದರೆಯಾಗುತ್ತದೆ. ಶನಿಮಹಾತ್ಮ ದೇವಸ್ಥಾನ ಮತ್ತು ಶ್ರೀರಾಮ ದೇವಸ್ಥಾನಗಳಿಗೆ ಬರುವ ಭಕ್ತರು ತೊಂದರೆ ಅನುಭವಿಸುತ್ತಿದ್ದಾರೆ. ಮಳೆ ಬಂದಾಗ ನೀರು ಸರಾಗವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಇಷ್ಟೆಲ್ಲಾ ಅವ್ಯವಸ್ಥೆಗೆ ಕಾರಣವಾಗಿದೆ. ಅಮೃತ್ ಯೋಜನೆ ಅಡಿ ಕೆಲಸ ಆರಂಭಿಸುವ ಭರವಸೆ ಹುಸಿಯಾಗಿದೆ.
| ಎಸ್.ರಾಘವೇಂದ್ರ ಸ್ಥಳೀಯ