ಜಿಲ್ಲೆ

‘ಗಂಗಕಲ್ಯಾಣ’ಯೋಜನೆಗೆ ಗ್ರಹಣ: ಜವಾಬ್ದಾರಿ ಮರೆತ ಜನಪ್ರತಿನಿಧಿಗಳು

ಸೋರಲಮಾವು ಶ್ರೀಹರ್ಷ ತುಮಕೂರು
ಬದುಕು ಕಟ್ಟಿಕೊಳ್ಳುವ ಆಸೆಯಿಂದ ಅವರಿವರ ಕೈಕಾಲು ಹಿಡಿದು ಕೊಳವೆಬಾವಿ ಕೊರೆಸಿಕೊಂಡ ಪರಿಶಿಷ್ಟ ಜಾತಿಯ ನೂರಾರು ಬಡ ರೈತರಿಗೆ ನಾಲ್ಕು ವರ್ಷವಾದರೂ ಮೋಟಾರ್, ಪಂಪ್ ಕೊಡದೆ ವಂಚಿಸಲಾಗಿದೆ.


ಆದಿಜಾಂಬವ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಭೋವಿ ಅಭಿವೃದ್ಧಿ ನಿಗಮದ ವತಿಯಿಂದ 2018-19ನೇ ಸಾಲಿನಲ್ಲಿ ಜಿಲ್ಲೆಯ 10 ತಾಲೂಕುಗಳಲ್ಲಿ ಕೊರೆದಿರುವ 200ಕ್ಕೂ ಹೆಚ್ಚು ಗಂಗಾಕಲ್ಯಾಣ ಕೊಳವೆಬಾವಿಗಳಿಗೆ ಈವರೆಗೂ ಮೋಟಾರ್, ಪಂಪ್, ಕೇಬಲ್, ಪೈಪ್‌ಗಳು ಸಿಕ್ಕಿಲ್ಲ.
2018-19ನೇ ಸಾಲಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿ., ನಿರ್ದೇಶಕ ಮಂಡಳಿ ಕೋಟಾದಡಿ ಜಿಲ್ಲೆಯಲ್ಲಿ 106 ಕೊಳವೆಬಾವಿಗಳನ್ನು ಕೊರೆಸಲಾಗಿದ್ದು ಈವರೆಗೂ ರೈತನ ಹೊಲಕ್ಕೆ ನೀರು ಬಂದಿಲ್ಲ.


ಬದುಕು ಕಟ್ಟಿಕೊಳ್ಳುವ ಬಯಕೆಯಿಂದ ಕೊಳವೆಬಾವಿ ಕೊರೆಸಿಕೊಂಡಿರುವ ಪರಿಶಿಷ್ಟ ಜಾತಿಯ ರೈತರು ನೀರು ಬಂದು ಕೃಷಿ ಮಾಡುವ ಕನಸು ನನಸಾಗಿಯೇ ಉಳಿದಿದ್ದು ನಿಗಮದ ಉದಾಸೀನತೆಯಿಂದ ಮಹತ್ವಾಕಾಂಕ್ಷಿ ಯೋಜನೆಯೇ ಹಳ್ಳ ಹಿಡಿದಿದೆ.

ಜವಾಬ್ದಾರಿ ಮರೆತ ಜನಪ್ರತಿನಿಧಿಗಳು: ಗಂಗಾಕಲ್ಯಾಣ ಯೋಜನೆಯಲ್ಲಿ ಕೊರೆದಿರುವ ಕೊಳವೆಬಾವಿಗಳಿಗೆ ಮೋಟಾರ್, ಪಂಪ್ ಹಾಗೂ ವಿದ್ಯುದೀಕರಣ ಮಾಡದಿರುವ ಬಗ್ಗೆ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಯೂ ಧ್ವನಿ ಎತ್ತದಿರುವುದು ಆಶ್ಚರ್ಯ ಮೂಡಿಸಿದೆ.
ಇಂತಹ ಸಮಸ್ಯೆಗಳ ಬಗ್ಗೆಯೇ ಚರ್ಚಿಸಲು ಅವಕಾಶವಿರುವ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಕೆಡಿಪಿ ಸಭೆಯಲ್ಲಿಯೂ ಜಿಲ್ಲೆಯ ಬಹುತೇಕರು ಭಾಗವಹಿಸುತ್ತಿಲ್ಲ, ಶಾಸನ ಸಭೆಯಲ್ಲಿ ಈ ಬಗ್ಗೆ ಕೇಳುವ ಜವಾಬ್ದಾರಿ, ಜಿಲ್ಲೆಯ ಶಾಸಕರಿಗೆ ಇಲ್ಲದಂತಾಗಿದೆ.

ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಕೊರೆದಿರುವ 100ಕ್ಕೂ ಹೆಚ್ಚು ಕೊಳವೆಬಾವಿಗಳು ಅನುಪಯುಕ್ತವಾಗಿವೆ. ಫಲಾನುಭವಿಗಳ ಪಟ್ಟಿ ಕೂಡ ನಮ್ಮ ನಿಗಮದಲ್ಲಿ ಇಲ್ಲ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಕಡತ ನೀಡದೆ ಸತಾಯಿಸುತ್ತಿದ್ದಾರೆ.
| ಜಯರಾಮಯ್ಯ ಜಿಲ್ಲಾ ವ್ಯವಸ್ಥಾಪಕ, ಆದಿಜಾಂಬವ ಅಭಿವೃದ್ಧಿ ನಿಗಮ

ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಆಯಾ ಶಾಸಕರ ಅಧ್ಯಕ್ಷತೆ ಸಮಿತಿಯಲ್ಲಿ ಆಯ್ಕೆ ಮಾಡಿ ಕೊರೆದಿರುವ 175 ಕೊಳವೆಬಾವಿಗಳಿಗೆ ಎಲ್ಲ ಸೌಕರ್ಯ ಒದಗಿಸಲಾಗಿದೆ. ಆದರೆ, ನಿಗಮದಿಂದ ನೇರವಾಗಿ ವಿಶೇಷ ಕೋಟಾದಲ್ಲಿ ಕೊರೆದಿರುವ 28 ಹಾಗೂ ಭೋವಿ ಅಭಿವೃದ್ಧಿ ನಿಗಮದ 25 ಕೊಳವೆಬಾವಿಗಳಿಗೆ ಸೌಲಭ್ಯ ಸಿಕ್ಕಿಲ್ಲ, ಈ ಬಗ್ಗೆ ನಿಗಮದ ಗಮನಕ್ಕೆ ತರಲಾಗಿದೆ.

| ಡಾ.ಬಾಲಕೃಷ್ಣಪ್ಪ ವ್ಯವಸ್ಥಾಪಕ ನಿರ್ದೇಶಕ, ಅಂಬೇಡ್ಕರ್ ಅಭಿವೃದ್ಧಿ ನಿಗಮ


ನಿಗಮದ ನಿರ್ದೇಶಕರ ಕೋಟಾದಲ್ಲಿ ಕೊರೆದ ಕೊಳವೆಬಾವಿಗಳ ಬಗ್ಗೆ ಜಿಲ್ಲಾ ಕಚೇರಿಗಳಲ್ಲಿ ಮಾಹಿತಿಯೇ ಇಲ್ಲ, ಕಳೆದ 3 ವರ್ಷದಿಂದ ಕಚೇರಿಗೆ ಅಲೆದು ಸಾಕಾಗಿದೆ.
| ರಮೇಶ್ ಗಂಗಾ ಕಲ್ಯಾಣ ಫಲಾನುಭವಿ, ಗುಬ್ಬಿ