ತುಮಕೂರು
ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ಚಂದ್ರಶೇಖರಗೌಡ ಸಮಾಜ ಕಟ್ಟುವ ಜತೆಗೆ ಪಕ್ಷ ಸಂಘಟನೆಯಲ್ಲಿ ಮಹಾಭಾರತದ ಕೃಷ್ಣನ ತಂತ್ರಗಾರಿಕೆಯಲ್ಲದೆ, ಅಗತ್ಯ ಸಂದರ್ಭದಲ್ಲಿ ಶಸ್ತ್ರಾಸ್ತ್ರ ಹಿಡಿಯುವ ಕಲೆಯನ್ನು ರೂಢಿಸಿಕೊಳ್ಳಬೇಕಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಕಿವಿಮಾತು ಹೇಳಿದರು.
ನಗರದ ಬಾಲಭವನದಲ್ಲಿ ಶುಕ್ರವಾರ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತಿದ್ದ ಬಿಜೆಪಿಯವರಿಗೆ ಹಿಮಾಚಲಪ್ರದೇಶದ ಫಲಿತಾಂಶ ತಿರುಗೇಟು ನೀಡಿದೆ. ರಾಜ್ಯದಲ್ಲಿಯೂ ಕನಿಷ್ಟ 130 ಸೀಟುಗಳನ್ನು ಗೆಲ್ಲಿಸಿಕೊಳ್ಳಲು ನಾವೆಲ್ಲರೂ ಹೋರಾಡಬೇಕಿದೆ. ದೇವರಾಜ ಅರಸು ನಂತರ ಹೆಚ್ಚು ಬಡವರ ಪರ ಕೆಲಸ ಮಾಡಿದವರು ಸಿದ್ದರಾಮಯ್ಯ ಎಂದು ಬಣ್ಣಿಸಿದರು.
ರಾಜಕೀಯ ಅಧಿಕಾರಕ್ಕಾಗಿ ತಳ ಸಮುದಾಯಗಳು ಒಗ್ಗೂಡುವ ಅಗತ್ಯವಿದೆ. ಜಿಲ್ಲೆಯ ಅಹಿಂದ ವರ್ಗಗಳ ಮತದಾರರ ಸಂಖ್ಯೆ ಹೆಚ್ಚಿದ್ದರು ರಾಜಕೀಯ ಅಧಿಕಾರ ಪಡೆಯುವಲ್ಲಿ ವಿಫಲರಾಗಿದ್ದೇವೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಬೇಸರಿಸಿದರು.
ದಲಿತರಿಗೂ ಸಿಎಂ ಆಗೋ ಯೋಗ !: ದಲಿತರು ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಿಗೆ ಈವರೆಗೂ ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಸ್ಥಾನ ನೀಡಿಲ್ಲ. ಮುಂದಿನ ದಿನಗಳಲ್ಲಿ ಆ ಸಮುದಾಯಗಳಿಗೂ ಸಿಎಂ ಆಗುವ ಯೋಗ ಒದಗಿಬರಲಿದೆ ಎಂಬ ವಿಶ್ವಾಸ ನಮ್ಮದು. ಆದರೆ, ಉಳಿದ ಎರಡು ಪಕ್ಷಗಳಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಎರಡು ಜಾತಿಗಳಿಗೆ ಮಾತ್ರ ಮೀಸಲಿರಿಸಲಾಗಿದ್ದು ಹೆಸರಿಗೆ ಮಾತ್ರ ಜಾತ್ಯಾತೀತ ಪಕ್ಷಗಳಾಗಿವೆ ಎಂದು ಕೆಎನ್ನಾರ್ ಪರೋಕ್ಷವಾಗಿ ಬಿಜೆಪಿ, ಜೆಡಿಎಸ್ ಪಕ್ಷಗಳನ್ನು ಟೀಕಿಸಿದರು.