ತುಮಕೂರಿನಲ್ಲಿ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಫ್ರೀಡಂ ಮಾರ್ಚ್‌ಗೆ ಆರ್.ರಾಮಕೃಷ್ಣ ಚಾಲನೆ ನೀಡಿದರು. ಡಾ.ರಫೀಕ್‌ಅಹ್ಮದ್, ಎಸ್.ಷಫೀಅಹ್ಮದ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಮತ್ತಿತರರು ಇದ್ದರು. 
ಜಿಲ್ಲೆ

ಬಿಜೆಪಿ ಸುಳ್ಳು ಭರವಸೆಗೆ ಮತ ನೀಡಿದ ಜನ: ಮಾಜಿ ಶಾಸಕ ಡಾ.ರಫೀಕ್‌ಅಹಮದ್ ಹೇಳಿಕೆ

ತುಮಕೂರು: ಭಾರತ ಸ್ವಾತಂತ್ರೃ ಚಳವಳಿಯಲ್ಲಿ ಕಾಂಗ್ರೆಸ್ ವಹಿಸಿದ್ದ ಪಾತ್ರವನ್ನು ಇಂದಿನ ಯುವಜನರಿಗೆ ತಿಳಿಸುವ ನಿಟ್ಟಿನಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಫ್ರೀಡಂ ಮಾರ್ಚ್ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಡಾ.ರಫೀಕ್‌ಅಹಮದ್ ತಿಳಿಸಿದರು.


ನಗರದ ಬೋರೇಗೌಡನ ಪಾಳ್ಯ ಸರ್ಕಲ್‌ನಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರೆ ಉದ್ದೇಶಿಸಿ ಮಾತನಾಡಿದ ಅವರು, ಬ್ರಿಟಿಷರನ್ನು ಭಾರತದಿಂದ ತೊಲಗಿಸಬೇಕು ಎಂಬ ಉದ್ದೇಶದಿಂದ 1885ರಲ್ಲಿ ಉದಯಿಸಿದ ಕಾಂಗ್ರೆಸ್ ದೇಶದ ಹೆಮ್ಮೆ ಎಂದರು.


1947ರವರೆಗೆ ನಿರಂತರವಾಗಿ ಹಲವಾರು ಹೋರಾಟ, ಸತ್ಯಾಗ್ರಹಗಳಲ್ಲಿ ಪಾಲ್ಗೊಂಡ ಪರಿಣಾಮ ದೇಶ ಬ್ರಿಟಿಷರ ಕಪಿ ಮುಷ್ಠಿಯಿಂದ ಹೊರಬರಲು ಸಾಧ್ಯವಾಯಿತು. ಈ ವಿಚಾರ ಇಂದಿನ ಯುವಜನತೆಗೆ ಅಷ್ಟಾಗಿ ತಿಳಿದಿಲ್ಲ ಹಾಗಾಗಿ, ಬಿಜೆಪಿ ಸುಳ್ಳು ಭರವಸೆಗಳಿಗೆ ಮತ ನೀಡಿ ಪರಿತಪಿಸುತ್ತಿದ್ದಾರೆ ಎಂದರು.


ಯುವಜನತೆಗೆ ಸ್ವಾತಂತ್ರ ಹೋರಾಟದ ವಿವಿಧ ಮಜುಲುಗಳನ್ನು ಪರಿಚಯಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಜನರ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಈ ಪಾದಯಾತ್ರೆ ಮಹತ್ವ ಪಡೆದುಕೊಂಡಿದೆ ಎಂದರು.


ಪಾದಯಾತ್ರೆಯಲ್ಲಿ ಮಾಜಿ ಮೇಯರ್ ಫರೀದಬೇಗಂ, ಮಾಜಿ ಶಾಸಕ ಷಫಿಅಹ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಟೋ ರಾಜು, ಮೆಹಬೂಬ್ ಪಾಷ, ತುಮಕೂರು ನಗರ ಉಸ್ತುವಾರಿ ಕೇಶವಮೂರ್ತಿ, ಡಾ.ಫ್ಹರಾನಾ, ಪಾಲಿಕೆ ವಿರೋಧಪಕ್ಷದ ನಾಯಕ ಜೆ.ಕುಮಾರ್, ಸದಸ್ಯರಾದ ನಯಾಜ್ ಅಹಮದ್, ಜೀಯಾ, ಮಹೇಶ್ ಮತ್ತಿತರರು ಇದ್ದರು.

ನಗರದಲ್ಲಿ ಮೆರವಣಿಗೆ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಅಧ್ಯಕ್ಷತೆಯಲ್ಲಿ ಮಾಜಿ ಶಾಸಕ ಎಸ್.ಷಪಿ ಅಹಮದ್ ಚಾಲನೆ ನೀಡಿರುವ ಈ ಫ್ರೀಡಂ ಮಾರ್ಚ್ ನಗರದ ಬಿ.ಜಿ.ಪಾಳ್ಯ ವೃತ್ತದಿಂದ ಹೊರಟ ಪ್ರೀಡಂ ಮಾರ್ಚ್ ಜಯಪುರ, ಪೂರ್‌ಹೌಸ್ ಕಾಲೋನಿ, ಟಿಪ್ಪು ನಗರ, ಕುರಿಪಾಳ್ಯ, ಅಜಾದ್ ನಗರ, ನಜರಾಬಾದ್ ಮೂಲಕ ಧ್ಹಾನಾಪಾಲೇಸ್ ಬಳಿ ಕೊನೆಯಾಯಿತು.

ಬಿಜೆಪಿಯಿಂದ ಕೋಮುದ್ವೇಷ: ಸುಳ್ಳು ಎಂಬುದು ಬಿಜೆಪಿಯ ಮೈ, ಮನಸ್ಸುಗಳಲ್ಲಿ ಹಾಸು ಹೊಕ್ಕಾಗಿದೆ. ಹಾಗಾಗಿಯೇ ಕಾಂಗ್ರೆಸ್ ಪಕ್ಷದ ಮೇಲೆ ಇಲ್ಲಸಲ್ಲದ ಗೂಬೆ ಕೂರಿಸಲು ಹೊರಟಿದೆ. ಪಠ್ಯಪುಸ್ತಕಗಳನ್ನು ಕೇಸರಿಕರಣ ಮಾಡಲು ಹೋಗಿ, ಸಾರ್ವಜನಿಕರಿಂದ ಮುಖಭಂಗಕ್ಕೆ ಒಳಗಾಗಿರುವ ಬಿಜೆಪಿ ಕೋಮು ದ್ವೇಷವಲ್ಲದೆ ಮತ್ತೇನನ್ನು ಬಿತ್ತಲು ಸಾಧ್ಯ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಪ್ರಶ್ನಿಸಿದರು.