ತುಮಕೂರು : ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅವಧಿ ಮಾರ್ಚ್ 26ಕ್ಕೆ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಹೊಸ ಕುಲಪತಿ ಆಯ್ಕೆ ಮಾಡಲು ಶೋಧನಾ ಸಮಿತಿ ರಚನೆಗೆ ಸರ್ಕಾರ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿವಿ ಸಿಂಡಿಕೇಟ್ ಸಭೆಯಲ್ಲಿ ವಿಶ್ರಾಂತ ಕುಲಪತಿ ಹೆಸರನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಆರ್.ಆರ್.ಹಂಚಿನಾಳ ಅವರನ್ನು ಸಿಂಡಿಕೇಟ್ ನಾಮನಿರ್ದೇಶನ ಸದಸ್ಯರನ್ನಾಗಿ ಶಿಫಾರಸು ಮಾಡಲಾಗಿದೆ. ಸಿಂಡಿಕೇಟ್ ನಾಮಿನಿ ಸದಸ್ಯರ ಹೆಸರನ್ನು ಕುಲಪತಿ ಆಯ್ಕೆ ಶೋಧನಾ ಸಮಿತಿಗೆ ಶೀಘ್ರ ಸೂಚಿಸುವಂತೆ ಸರ್ಕಾರದಿಂದ ಎರಡು ಬಾರಿ ಪತ್ರ ಬಂದಿದ್ದು, ಶುಕ್ರವಾರ ನಡೆದ ಸಭೆಯಲ್ಲಿ ತರಾತುರಿಯಲ್ಲೇ ಪ್ರೊ.ಹಂಚಿನಾಳ ಆಯ್ಕೆಗೆ ಸರ್ವಸಮ್ಮತದ ಒಪ್ಪಿಗೆ ನೀಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಶೋಧನಾ ಸಮಿತಿ: ಕುಲಪತಿ ಆಯ್ಕೆಯ ಶೋಧನಾ ಸಮಿತಿಯನ್ನು ರಾಜ್ಯಪಾಲರು ರಚಿಸಲಿದ್ದು, ಮೂವರು ಅಥವಾ ನಾಲ್ವರು ಸದಸ್ಯರನ್ನು ಸಮಿತಿ ಒಳಗೊಂಡಿರಲಿದೆ. ಉನ್ನತ ಶಿಕ್ಷಣ ಸಚಿವರ ಸಲಹೆ ಸಹ ಪರಿಗಣಿಸಲಾಗುವುದು. ಯುಜಿಸಿ ನಾಮಿನಿ, ಸಿಂಡಿಕೇಟ್ ನಾಮಿನಿ ಹಾಗೂ ರಾಜ್ಯಪಾಲರು ಸೂಚಿಸುವ ನಾಮಿನಿ ಸದಸ್ಯರು ಸಮಿತಿಯಲ್ಲಿರಲಿದ್ದಾರೆ. ಶುಕ್ರವಾರವೇ ಸರ್ಕಾರಕ್ಕೆ ಸಿಂಡಿಕೇಟ್ ಸಭೆಯಲ್ಲಿ ಅಂತಿಮಗೊಳಿಸಿರುವ ಹೆಸರನ್ನು ಮುಚ್ಚಿದ ಲಕೋಟೆಯಲ್ಲಿ ಕಳುಹಿಸಲಾಯಿತು. ಸಿಂಡಿಕೇಟ್ ಸಭೆಯಲ್ಲಿ ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ, ಸಿಂಡಿಕೇಟ್ ಸದಸ್ಯರಾದ ಟಿ.ಎಸ್.ಸುನಿಲ್ ಪ್ರಸಾದ್, ಟಿ.ಡಿ.ವಿನಯ್, ಪ್ರಸನ್ನಕುಮಾರ್, ಶ್ರೀನಿವಾಸ್, ಭವ್ಯಾ, ಭಾಗ್ಯಲಕ್ಷ್ಮೀ, ಡೀನ್‌ಗಳಾದ ಪ್ರೊ.ಪರಶಿವಮೂರ್ತಿ, ಪ್ರೊ.ಎಲ್.ಪಿ.ರಾಜು ಉಪಸ್ಥಿತರಿದ್ದರು.
ಕಳೆದ ಬಾರಿಯ ಶೋಧನಾ ಸಮಿತಿ : ಕಳೆದ ಬಾರಿಯ ಕುಲಪತಿ ಆಯ್ಕೆ ಶೋಧನಾ ಸಮಿತಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ ಅಧ್ಯಕ್ಷರಾಗಿದ್ದು, ಸಮಿತಿಯಲ್ಲಿ ರಾಜ್ಯಪಾಲರ ನಾಮಿನಿಯಾಗಿ ಪ್ರೊ.ಶೈಲೇಶ್ ಕುಲಕರ್ಣಿ, ಯುಜಿಸಿ ನಾಮಿನಿಯಾಗಿ ಪ್ರೊ.ಜೈರೂಪ್ ಸಿಂಗ್ ಹಾಗೂ ವಿವಿ ಸಿಂಡಿಕೇಟ್ ನಾಮಿನಿಯಾಗಿ ಪ್ರೊ.ರಾಮೇಗೌಡ ಇದ್ದರು.
3 ಲಕ್ಷ ಉತ್ತರ ಪುಸ್ತಕಗಳಿಗೆ 20 ಲಕ್ಷ ರೂ.,! : ತುಮಕೂರು ವಿವಿಯ ಪರೀಕ್ಷಾ ವಿಭಾಗಕ್ಕೆ 3 ಲಕ್ಷ ಪ್ರಮಾಣದ ಉತ್ತರ ಪುಸ್ತಕಗಳನ್ನು ಬೆಂಗಳೂರಿನ ಶ್ರೀ ವೆಂಕಟೇಶ್ವರ ಎಂಟರ್‌ಪ್ರೈಸಸ್ ಪೂರೈಸಿದ್ದು, ಇವುಗಳಿಗೆ 20 ಲಕ್ಷ 10 ಸಾವಿರ ರೂಪಾಯಿಯನ್ನು ವಿವಿ ಆಡಳಿತ ಮಂಡಳಿ ಪಾವತಿಸಿದ್ದು, ಶುಕ್ರವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಹಣಕಾಸು ಪತ್ರವನ್ನು ಸ್ಥಿರೀಕರಿಸಲಾಯಿತು.
125 ಅತಿಥಿ ಉಪನ್ಯಾಸಕರ ಮುಂದುವರಿಕೆ : ಕಳೆದ ಸಾಲಿನಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 125 ಅತಿಥಿ ಉಪನ್ಯಾಸಕರನ್ನು ಪ್ರಸ್ತುತ ಸಾಲಿಗೂ ಮುಂದುವರಿಸಲಾಗಿದೆ. ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗಗಳಲ್ಲಿನ ಕಾರ್ಯಭಾರಕ್ಕೆ ಅನುಗುಣವಾಗಿ ಅವಶ್ಯವಿರುವ 129 ಅತಿಥಿ ಉಪನ್ಯಾಸಕರನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲಾಗಿದೆ. ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಪಡೆಯಲಾಯಿತು.