ಜಿಲ್ಲೆ

ಜೈಲಿಗೆ ಹೋಗಿಬಂದವರಿಗೆ ಏರ್‌ಪೋರ್ಟ್‌ನಲ್ಲಿ ಅದ್ದೂರಿ ಸ್ವಾಗತ !

ತುಮಕೂರು: ಶ್ರೀಮಂತಿಕೆ, ಅಧಿಕಾರದಲ್ಲಿದ್ದವರನ್ನು ಈ ಸಮಾಜ ಪೂಜಿಸುತ್ತೇ ಹೊರತು ಪ್ರಾಮಾಣಿಕರನ್ನಲ್ಲ. ಈ ಹಿಂದೆ ಜೈಲಿಗೆ ಹೋದರೆ ಸಾಮಾಜಿಕಬಹಿಷ್ಕಾರ ಹಾಕಲಾಗುತ್ತಿತ್ತು. ಆದರೆ, ಈಗ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆ ಆಗಿಬಂದವರನ್ನು ಏರ್‌ಪೋರ್ಟ್‌ನಲ್ಲೇ ಸೇಬಿನ ಹಾರ ಹಾಕಿ ಸ್ವಾಗತಿಸುತ್ತಿರುವುದು ವಿಪರ್ಯಾಸ ಎಂದು ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಬೇಸರಿಸಿದರು.

ವಿವಿಯಲ್ಲಿ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿಯ ಸಹಯೋಗದಲ್ಲಿ ಸೋಮವಾರ ಆಯೋಜಿದ್ದ ವಿಶ್ವವಿದ್ಯಾಲಯದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಮಧ್ಯಾಹ್ನದ ಭೋಜನ ಯೋಜನೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಾನವೀಯತೆ, ಮನುಷ್ಯತ್ವ ಇದ್ದರೆ ಹಸಿದ ಹೊಟ್ಟೆಗಳು ಸಂಖ್ಯೆ ಕಡಿಮೆ ಆಗಲಿದೆ. ಮೀಸಲಾತಿ ಕೇಳುವ ಬದಲು ಸ್ವಾಮೀಜಿಗಳು ಹಸಿದ ಹೊಟ್ಟೆಗೆ ಅನ್ನ ಹಾಕಿದರೆ ಸಾಕು. ದುರಾಸೆ ತುಂಬಿದ ಈ ಸಮಾಜ ಬದಲಾಯಿಸದೇ ಇದ್ದರೆ ಕಂಟಕ ಎದುರಾಗಲಿದೆ. ಆದರೆ, ಮನೆಯಲ್ಲು ಇದನ್ನು ಮಕ್ಕಳಿಗೆ ಕಲಿಸುವರೇ ಇಲ್ಲವಾಗಿದೆ. ಮಾನವೀಯತೆಯ ಅಂಶಗಳಿಗೆ ಸಾಕ್ಷಿಯಾಗಿರುವ ಈ ಯೋಜನೆ ಮಧ್ಯಾಹ್ನದ ಊಟಕ್ಕಷ್ಟೇ ಸೀಮಿತವಾಗಬಾರದು. ಹಿರಿಯರು ಕಟ್ಟಿರುವ ಸಮಾಜದಲ್ಲಿ ಮೌಲ್ಯಯುತ ಬದುಕನ್ನು ರೂಪಿಸಿಕೊಳ್ಳುವುದು ವಿದ್ಯಾರ್ಥಿಗಳ ಜವಾಬ್ದಾರಿ ಎಂದು ಸಲಹೆಯಿತ್ತರು.