ತುಮಕೂರು: ಸಿದ್ಧಗಂಗಾ ಆಸ್ಪತ್ರೆ,ಮೈ ಸೈಕಲ್ ವರ್ಡ್,ತುಮಕೂರು ಸೈಕ್ಲಿಂಗ್ ಕ್ಲಬ್ ಸಹಯೋಗದಲ್ಲಿ ವಿಶ್ವ ಕಿಡ್ನಿ ದಿನದ ಅಂಗವಾಗಿ ಮಾ.12 ರ ಭಾನುವಾರ ಸೈಕ್ಲೋಥೋನ್ ಆಯೋಜಿಸಲಾಗಿದೆ ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.
ಸಿದ್ಧಗಂಗಾ ಆಸ್ಪತ್ರೆಯಲ್ಲಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿ ಎಲ್ಲಾ ವಯೋಮಾನದವರೂ ಕೂಡ ಸೈಕ್ಲಥೋನ್ ನಲ್ಲಿ ಭಾಗವಹಿಸಬಹುದಾಗಿದ್ದು ಕಿಡ್ನಿ ಆರೋಗ್ಯ ಅರಿವು ಕಾರ್ಯಕ್ರಮದ ಪ್ರಮುಖ ಧ್ಯೇಯವಾಗಿದೆ ಎಂದರು.
ಸೈಕ್ಲಥೋನ್ ನಕ್ಷೆ ಕುರಿತು ಮಾಹಿತಿ ನೀಡಿದ ಹಿರಿಯ ಹೃದ್ರೋಗ ತಜ್ಞ,ಸೂಪರ್ ಸ್ಪೆಷಾಲಿಟಿ ವಿಭಾಗದ ಮುಖ್ಯಸ್ಥ ಡಾ.ಹೆಚ್.ಎಂ.ಭಾನುಪ್ರಕಾಶ್ ಮಾ.12 ಬೆಳಗ್ಗೆ 6.30 ಕ್ಕೆ ಸಿದ್ಧಗಂಗಾ ಆಸ್ಪತ್ರೆಯಿಂದ ಆರಂಭವಾಗುವ ಸೈಕ್ಲಥಾನ್ ನಾಮದ ಚಿಲುಮೆಯಲ್ಲಿ ಅಂತ್ಯವಾಗಲಿದ್ದು ಜಿಲ್ಲೆಯಾದ್ಯಂತ ನೂರಾರು ಹೆಚ್ಚು ಸೈಕ್ಲಿಸ್ಟ್ ಹಾಗೂ ಸಾರ್ವಜನಿಕರು ಹಾಜರಾಗುವ ಸಾಧ್ಯತೆಯಿದೆ. ಈಗಾಗಲೇ ನೊಂದಣಿ ಕೂಡ ಆರಂಭವಾಗಿದೆ ಎಂದರು.
ಮೂತ್ರಪಿಂಡ ರೋಗ ತಜ್ಞರಾದ ಡಾ.ಕುಶಾಲ್ ಮಾತನಾಡಿ ಕಿಡ್ನಿ ಸಮಸ್ಯೆ ಕುರಿತು ಅರಿವಿನ ಕೊರತೆಯಿಂದ ಸಾಕಷ್ಟು ಜನರು ಕಿಡ್ನಿ ವೈಫಲ್ಯಕ್ಕೆ ಒಳಗಾಗುತ್ತಿದ್ದಾರೆ. ಸರಿಯಾದ ಆಹಾರ,ಜೀವನಶೈಲಿಯಿಂದ ಕಿಡ್ನಿ ಸಮಸ್ಯೆ ದೂರವಿಡಬಹುದಾಗಿದ್ದು ಸೈಕ್ಲಥೋನ್ ಮೂಲಕ ಮತ್ತಷ್ಟು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಹಿರಿಯ ಅರವಳಿಕೆ ತಜ್ಞ ಹಾಗೂ ಸೈಕ್ಲಿಸ್ಟ್ ಸಿ.ವಿ. ಸ್ವಾಮಿ, ಸೈಕ್ಲಿಸ್ಟ್ ಡಾ.ಅಶ್ವಿನ್,ಸೈಕಲ್ ವರ್ಡ್ ಮಾಲೀಕ ಮಲ್ಲಿಕಾರ್ಜುನ್, ಮೆಡಿಕಲ್ ಕಾಲೇಜು ಪ್ರಾಚಾರ್ಯ ಡಾ.ಶಾಲಿನಿ ಉಪಸ್ಥಿತರಿದ್ದರು.