ತುಮಕೂರು: ಹೆತ್ತ ತಾಯಿ-ತಂದೆ ಜತೆ ಗುರುವನ್ನು ಸ್ಮರಿಸುತ್ತಾ ವಿದ್ಯಾರ್ಥಿಗಳು ಭವ್ಯ ಭವಿಷ್ಯದ ನಿರ್ಮಾಣದ ಕಡೆ ಮನಸ್ಸನ್ನು ಮಾಡಬೇಕು ಎಂದು ನಗರದ ರಾಮಕೃಷ್ಣ -ವಿವೇಕಾನಂದ ಆಶ್ರಮದ ಅಧ್ಯಕ್ಷ ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಬುಧವಾರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಯಶಸ್ಸನ್ನು ಸಾಧಿಸಲು ಕುರಿತಾದ ಪುನಶ್ಚೇತನ ಕಾರ್ಯಗಾರ ಮತ್ತು ಶೇಷಾದ್ರಿಪುರಂ ಶಿಕ್ಷಣ ದತ್ತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶೇಷಾದ್ರಿಪುರಂ ಸಂಸ್ಥೆ ಒಂದು ಬೃಹತ್ ಸರಸ್ವತಿಯ ಸಾಮ್ರಾಜ್ಯ. ಈ ಸಂಸ್ಥೆಯ ಜೀವನಾಡಿಗಳಾದ ವಿದ್ಯಾರ್ಥಿಗಳು ಶಿಸ್ತು, ಶಿಕ್ಷಣದ ಜತೆಗೆ ಸಂಸ್ಕಾರವನ್ನು ಕಲಿಯಬೇಕು. ನಮ್ಮ ಸಂಸ್ಕೃತಿ, ಆಚಾರವಿಚಾರಗಳನ್ನು ಮಕ್ಕಳು ರೂಢಿಸಿಕೊಂಡು ಮೌಲ್ಯಯುತ ಶಿಕ್ಷಣಕ್ಕು ತಮ್ಮನ್ನು ತೆರೆದುಕೊಳ್ಳಬೇಕು ಎಂದರು.
ಶೇಷಾದ್ರಿಪುರಂ ದತ್ತಿ ಸಂಸ್ಥೆಯ ಗೌರವ ಕಾರ್ಯದರ್ಶಿ ನಾಡೋಜ ವೂಡೇ ಪಿ. ಕೃಷ್ಣ ಮಾತನಾಡಿ, ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ವಿಶ್ವದಾದ್ಯಂತ ಯಶಸ್ಸನ್ನ ಪಡೆದು ಸಮಾಜಕ್ಕೆ ಆಸ್ತಿ ಆಗಬೇಕು, ನಿಮ್ಮ ಶ್ರಮಕ್ಕೆ ತಕ್ಕ ಗೌರವ ಸಿಗಬೇಕು ಎಂದರು.
ಕೈಗೆಟಕುವ ದರದಲ್ಲಿ ಶಿಕ್ಷಣ ಕೊಡುವುದು ಮತ್ತು ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವುದು ನಮ್ಮ ಶಿಕ್ಷಣ ಸಂಸ್ಥೆಯ ಮುಖ್ಯ ಉದ್ದೇಶ. ವಿದ್ಯಾರ್ಥಿಗಳು ಹಿರಿಯರ ಕನಸುಗಳನ್ನು ನನಸು ಮಾಡಬೇಕು. ಸಾಧನೆ ಮಾಡಲು ಬೇಕಾದ ವಾತಾವರಣ ನಮ್ಮ ಸಂಸ್ಥೆಯ ಕಾಲೇಜಿನಲ್ಲಿ ಇದೆ. ಇಂತಹ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವುದು ನಿಮ್ಮ ಪುಣ್ಯ ಎಂದು ತಿಳಿಸಿದರು.
2022-23 ನೇ ಸಾಲಿನ ದ್ವಿತೀಯ ಪಿಯುಸಿ ಯಲ್ಲಿ ವಾಣಿಜ್ಯ ವಿಭಾಗದಿಂದ ರಾಜ್ಯಕ್ಕೆ 12ನೇ ರ‌್ಯಾಂಕ್ ಪಡೆದ ಎಂ. ಜಾಹ್ನವಿ, 14ನೇ ರ‌್ಯಾಂಕ್ ಪಡೆದ ಪಿ.ಸೌಮ್ಯಶ್ರೀ ಹಾಗೂ ಎನ್‌ಇಇಟಿಯಲ್ಲಿ ಉತ್ತಮ ಸಾಧನೆತೋರಿದ ಎಸ್.ವಿಷ್ಣು , ಹೇಮಂತ್‌ರನ್ನು ಸನ್ಮಾನಿಸಲಾಯಿತು.ಹೊಸದಾಗಿ ಪ್ರಥಮ ಪಿಯುಸಿಗೆ ಪ್ರವೇಶ ಪಡೆದಿರುವ ಶೇ.85 ಕ್ಕಿಂತ ಹೆಚ್ಚು ಅಂಕಗಳಿಸಿರುವ 91 ವಿದ್ಯಾರ್ಥಿಗಳಿಗೆ ಹಾಗೂ ಶೇ.95 ಕ್ಕಿಂತ ಹೆಚ್ಚು ಅಂಕ ಗಳಿಸಿರುವ 16 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಧರ್ಮದರ್ಶಿ ಡಬ್ಲ್ಯೂ.ಡಿ ಅಶೋಕ್, ಬಿ.ಸಿ.ಲೋಕನಾಥ್, ವೀರಭದ್ರಯ್ಯ, ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ವಿ.ಬಸವರಾಜು, ಶೇಷಾದ್ರಿಪುರಂ ಪದವಿ ಕಾಲೇಜಿನ ಪ್ರಾಂಶುಪಾಲ ಜಿ.ಟಿ.ಜಗದೀಶ್ ಉಪಸ್ಥಿತರಿದ್ದರು.