ತುಮಕೂರು: ತುಮಕೂರು ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಪ್ರತಿಭಟನೆ, ಚಳವಳಿ ನಡೆಸಲು ಅನುಮತಿ ಕಡ್ಡಾಯಗೊಳಿಸಿರುವ ಜಿಲ್ಲಾಧಿಕಾರಿ ಶುಭಕಲ್ಯಾಣ್ ಏಕಪಕ್ಷೀಯ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಭೇಟಿ ಮಾಡಿದ ರೈತ ಮುಖಂಡರು, ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಚಳವಳಿಗೆ ಅವಕಾಶವಿದೆ ಆದರೆ, ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಸುತ್ತಮುತ್ತ ಪ್ರತಿಭಟನೆ, ಚಳುವಳಿಗಳಿಗೆ ನಿಷೇಧ ವಿಧಿಸಿರುವುದನ್ನು ನೋಡಿದರೆ, ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೆಯೇ ಇಲ್ಲ, ಸರ್ವಾಧಿಕಾರಿ ಆಡಳಿತದಲ್ಲಿ ಇದ್ದೇವೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಸಾರ್ವಜನಿಕರ ಸೇವಕರಾದ ಅಧಿಕಾರಿಗಳು ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡುವ ವೇಳೆ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಒದಗಿಸಬೇಕಾದ್ದು ಅವರ ಕರ್ತವ್ಯ. ಆದರೆ, ಪ್ರತಿಭಟನೆ ನಡೆಸದಂತೆ ನಿರ್ಭಂದ ಹಾಕಿರುವ ಪ್ರಜಾಪ್ರಭುತ್ವವೇ ಎಂದು ಪ್ರಶ್ನಿಸಿದ ಅವರು, ಕೂಡಲೇ ತಾವು ಹೊರಡಿಸಿರುವ ಆದೇಶ ಹಿಂಪಡೆಯಬೇಕು ಆಗ್ರಹಿಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಕರ್ನಾಟಕದಲ್ಲಿ ಮೈನಿಂಗ್ ಲಾಬಿ ಎಗ್ಗಿಲ್ಲದೆ ನಡೆಯುತ್ತಿದ್ದು, ಆಂಧ್ರ ಸರ್ಕಾರ ಒಬಳಾಪುರಂ ಗಣಿಗಾರಿಕೆ ನಡೆದಿರುವ ಕರ್ನಾಟಕದಲ್ಲಿ ಎಂದು ಸ್ಪಷ್ಟಪಡಿಸಿದರೂ, ಇದುವರೆಗೂ ಕರ್ನಾಟಕ ಸರ್ಕಾರ ಮೌನಕ್ಕೆ ಶರಣಾಗಿರುವುದನ್ನು ನೋಡಿದರೆ, ಸರ್ಕಾರ ಹಾಗೂ ವಿರೋಧ ಪಕ್ಷಗಳೆಲ್ಲವೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದರು.
ಗಣಿಗಾರಿಕೆ ವಿರೋಧಿಸಿ ಚಾಮರಾಜನಗರದಿಂದ ಬಳ್ಳಾರಿಯವರೆಗೂ ಪಾದಯಾತ್ರೆ ನಡೆಸಿದ್ದ ಸಿದ್ದರಾಮಯ್ಯ, ಈಗ ಕಣ್ಣುಮುಚ್ಚಿ ಕುಳಿತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಗಣಿಗಾರಿಕೆಗೆ ಚೌಕಟ್ಟು ವಿಧಿಸಬೇಕಿದ್ದ ಸರ್ಕಾರ, ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಲು ಮುಂದಾದಂತೆ ಕಾಣುತ್ತಿದೆ. ಅಕ್ರಮ ಗಣಿಗಾರಿಕೆಯಲ್ಲಿ ಪೊಲೀಸ್,ಅರಣ್ಯ,ಕಂದಾಯ ಪರಿಸರ ಇಲಾಕೆ ಶಾಮೀಲಾಗಿವೆ ಎಂದು ಆರೋಪಿಸಿದರು.
2014 ರಲ್ಲಿ ತುಮಕೂರು ನಗರದ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಬಹಳ ವಿಜೃಂಭಣೆಯಿಂದ ಪುಡ್ಪಾರ್ಕ್ ಆರಂಭ ಮಾಡಲಾಯಿತು. ಆರಂಭವಾದ ಒಂದೇ ವರ್ಷಕ್ಕೆ ಮುಚ್ಚಿ, 100 ಎಕರೆ ಜಾಗವನ್ನು ಸಣ್ಣ, ಸಣ್ಣ ತುಂಡು ಮಾಡಿ, ಮಾರಾಟ ಮಾಡಲಾಗಿದೆ. ಹಗಲು ದರೋಡೆ ನಡೆದರೂ ಇದುವರೆಗೂ ಯಾರ ವಿರುದ್ದವೂ ಕ್ರಮವಿಲ್ಲ. ವಿರೋಧ ಪಕ್ಷ ಸಹ ಸಂಪೂರ್ಣ ನಿಷ್ಕ್ರೀಯವಾಗಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಧನಂಜಯ ಆರಾಧ್ಯ ಮಾತನಾಡಿ, ತುರುವೇಕೆರೆ ತಾಲೂಕು ಕೋಳಗಟ್ಟ ಗ್ರಾಮದ ಸರ್ವೆ ನಂಬರ್ 65 ರಲ್ಲಿ ರಾಜೀವ್ ಎಂಬ ವ್ಯಕ್ತಿ 2 ಎಕೆರೆ ಜಾಗವನ್ನು ಕ್ರಷರ್ಗೆ ಲೀಸ್ ಪಡೆದು, ಅಕ್ಕಪಕ್ಕದಲ್ಲಿದ್ದ ಸುಮಾರು 8 ಎಕೆರೆ ಸರಕಾರಿ ಗೋಮಾಳ, ಅರಣ್ಯ ಇಲಾಖೆ ಜಾಗವನ್ನು ಒತ್ತುವರಿ ಮಾಡಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ಗಣಿಗಾರಿಕೆಯಿಂದ ಧೂಳಿನ ಕಣಗಳು ತೆಂಗು ಮತ್ತು ಅಡಕೆ ಇನ್ನಿತರ ಆಹಾರ ಬೆಳೆಗಳ ಮೇಲೆ ಕುಳಿತು, ಇಡೀ ಬೆಳೆ ನಾಶವಾಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ಮನವಿ ನೀಡಿದ್ದರೂ ಜಿಲ್ಲಾಡಳಿತ ಮೌನವಾಗಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ, ತುರುವೇಕೆರೆ ತಾಲೂಕು ಅಧ್ಯಕ್ಷ ಗಂಗಾಧರಪ್ಪ, ಚಿಕ್ಕನಾಯಕನಹಳ್ಳಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್, ತುಮಕೂರು ಜಿಲ್ಲಾ ಮಹಿಳಾ ಘಟಕದ ಶಶಿಕಲಾ, ಗುಬ್ಬಿ ಮಹಿಳಾ ಘಟಕದ ಎಸ್.ಕಲ್ಪನಾ ಇದ್ದರು.