ಜಿಲ್ಲೆ

ತುಮಕೂರು ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ 88.41 ಕೋ.ರೂ., ಬಿಡುಗಡೆ

ತುಮಕೂರು: ಸಿದ್ದಗಂಗಾ ಮಠದ ಮಾದರಿಯಲ್ಲೇ ತುಮಕೂರಿನ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು ರೈಲ್ವೆ ಸಚಿವಾಲಯವು 88.41 ಕೋ.ರೂ., ಬಿಡುಗಡೆ ಮಾಡಿದೆ.

ಅಮೃತ್​ ಭಾರತ್​ ಯೋಜನೆಯಡಿ ತುಮಕೂರು ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು ಏರ್​ಪೋರ್ಟ್​ಗಳಂತೆ ಇಲ್ಲಿಯೂ ಅತ್ಯಾಧುನಿಕ ಸೌಲ್ಯಭಗಳನ್ನು ಒದಗಿಸಬೇಕೆಂಬುದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಕನಸಾಗಿದ್ದು ಅವರ ಒತ್ತಾಸೆಯಂತೆ ಅನುಮೋದನೆ ಸಿಕ್ಕಿದೆ.

ಬೆಂಗಳೂರು ನಂತರ ರಾಜ್ಯದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ತುಮಕೂರು ಸಹ ಒಂದು. ಕೈಗಾರಿಕಾ ಕ್ರಾಂತಿಗೆ ಮುನ್ನುಡಿ ಬರೆಯಲಾಗಿದ್ದು ಕೈಗಾರಿಕಾ ಅಭಿವೃದ್ಧಿಗೆ ವೇಗ ನೀಡಲಾಗಿದೆ. ಸಚಿವರಾದ ಸೋಮಣ್ಣ ಪ್ರತಿನಿಧಿಸುವ ತುಮಕೂರು ಲೋಕಸಭಾ ಕ್ಷೇತ್ರದ ರೈಲ್ವೆ ನಿಲ್ದಾಣಕ್ಕೆ ಹೈಟೆಕ್​ ಸ್ಪರ್ಶ ಕೊಡಲಾಗುತ್ತಿದೆ.

ಸಾಮಾನ್ಯ ರೈಲ್ವೆ ಪ್ರಯಾಣಿಕರಿಗು ವಿಶ್ವ ದರ್ಜೆಯ ಸೌಲಭ್ಯಗಳು ಸಿಗಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಆಶಯವಾಗಿದೆ. ಈ ನಿಟ್ಟಿನಲ್ಲಿ ತುಮಕೂರಿನ ನಿಲ್ದಾಣವನ್ನು ಪ್ರಯಾಣಿಕ ಸ್ನೇಹಿ ಸೌಕರ್ಯಗಳನ್ನು ಒಳಗೊಂಡಂತೆ ಆಧುನೀಕರಣಗೊಳಿಸಿ ಮೇಲ್ದರ್ಜೆಗೇರಿಸಲು ರೈಲ್ವೆ ಸಚಿವಾಲಯ 88 ಕೋಟಿ ರೂ., ಅನುದಾನ ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಅವರಿಗೆ ತುಮಕೂರು ಜನತೆಯ ಪರವಾಗಿ ಸಚಿವ ಸೋಮಣ್ಣ ಕೃತಜ್ಞತೆ ಸಲ್ಲಿಸಿದ್ದಾರೆ.

ಇಲಾಖಾ ಪರೀಕ್ಷೆ ಕನ್ನಡದಲ್ಲಿ

ಕೇಂದ್ರ ರೈಲ್ವೆ ಹಾಗು ಜಲ ಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಸೂಚನೆ ಮೇರೆಗೆ ನೈಋತ್ಯ ರೈಲ್ವೆ ಇಲಾಖೆಯು ಮುಂಬಡ್ತಿಗೆ ಸಂಬಂಧಿಸಿದ ಇಲಾಖಾ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ನಡೆಸಲು ಅಧಿಸೂಚನೆ ಹೊರಡಿಸಿದೆ.

ಈ ಮೊದಲು ಇಂಗ್ಲೀಷ್​, ಹಿಂದಿ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿತ್ತು. ಇದೀಗ ಇವುಗಳ ಜತೆಗೆ, ಕನ್ನಡದಲ್ಲಿಯೂ ಸಹ ಪರೀಕ್ಷೆ ನಡೆಸಲಾಗುವುದು. ಇದರಿಂದ ಕನ್ನಡಿಗ ಪರೀಕ್ಷಾರ್ಥಿಗಳಿಗೆ ಸ್ವಭಾಷೆಯಲ್ಲಿ ಪರೀಕ್ಷೆಯನ್ನು ಬರೆಯಲು ಅನುಕೂಲವಾಗುವುದು. ಈಗಾಗಲೇ ರೈಲ್ವೆ ಇಲಾಖೆಗೆ ಸೇರಲು ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ಸಚಿವರ ಈ ಸೂಚನೆಯಿಂದ ನೌಕರರು ಇಲಾಖೆಗೆ ಸೇರಿದ ನಂತರವೂ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು, ಅನೇಕ ಕನ್ನಡಿಗ ನೌಕರರಿಗೆ ಈ ಅವಕಾಶ ವರಪ್ರದವಾಗಿದೆ.