ಜಿಲ್ಲೆ

ಎಸ್​​ಐಟಿ ಕಾಲೇಜಿನ ಡಾ.ಸುಧೀರ್ ಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸುಧೀರ್ ಅವರಿಗೆ 2020ನೇ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ರೋಚೆ ರೀಸರ್ಚ್ ಫೆಲೋಶಿಪ್ ಲಭಿಸಿದೆ. ಪ್ರತಿವರ್ಷ ಜಗತ್ತಿನ ಮೂವರು ಸಂಶೋಧಕರಿಗೆ ಈ ಫೆಲೋಶಿಪ್ ನೀಡಲಿದ್ದು ತುಮಕೂರಿನ ಸುಧೀರ್ ಈ ಗೌರವಕ್ಕೆ ಭಾಜನರಾಗಿದ್ದಾರೆ. ಈ ಅಂತಾರಾಷ್ಟ್ರೀಯ ಪ್ರಶಸ್ತಿಯ ಜತೆಗೆ 7.5 ಲಕ್ಷ ರೂ., ನಗದು ಮೊತ್ತವನ್ನು ಫೆಲೋಶಿಪ್‌ಗೆ ನೀಡಲಾಗಿದೆ.

ಅಮೆರಿಕಾದ ಅಸೋಸಿಯೇಷನ್ ಫಾರ್ ರೀಸರ್ಚ್ ಇನ್ ವಿಷನ್ ಸೈನ್ಸ್ ಮತ್ತು ಆಪ್ತಾಲ್ಮಾಲಜಿ (ಎಆರ್‌ವಿಒ) ಸಂಸ್ಥೆಯು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಡಾ.ಸುಧೀರ್ ಅವರು ಕೆಮಿಕಲ್ ಇಂಜಿನಿಯರಿಂಗ್ ಮತ್ತು ನ್ಯಾನೊಟೆಕ್ನಾಲಾಜಿ ಬಳಸಿ ಕಣ್ಣಿನ ಪಾರದರ್ಶಕ ಪಟಲದ ಕಸಿಯನ್ನು (ಕಾರ್ನಿಯಾ ಟ್ರಾನ್ಸ್ ಪ್ಲೆಂಟೇಷನ್) ವರ್ಧಿಸುವ ಸಂಶೋಧನೆಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಅತ್ಯಂತ ಗಮನಾರ್ಹವಾದ ವಿಷಯವೇನೆಂದರೆ, ಈ ಪ್ರಶಸ್ತಿಯನ್ನು ಪ್ರತಿವರ್ಷ ಪ್ರಪಂಚದ ಕೇವಲ ಮೂರು ಸಂಶೋಧಕರಿಗೆ ಮಾತ್ರ ಕೊಡಲಾಗುತ್ತದೆ. ಡಾ.ಸುಧೀರ್ ಈ ಪ್ರಶಸ್ತಿಯನ್ನು 2021ನೇ ಸಾಲಿನ ಎಆರ್‌ವಿಒ ಕಾನ್ಸ್‌ಫರೆನ್ಸ್‌ನಲ್ಲಿ ಪಡಯಲು ಹಾಗೂ ಅಮೆರಿಕಾದ ಇಂಡಿಯಾನಾ ವಿಶ್ವವಿದ್ಯಾಲಯದ ಡಾ.ಎಸ್. ಪಿ.ಶ್ರೀನಿವಾಸ್ ಜತೆ ಹೆಚ್ಚಿನ ಸಂಶೋಧನೆ ಮಾಡಲು ಅಮೆರಿಕಾಗೆ ತೆರಳಲಿದ್ದಾರೆ.

ಡಾ.ಸುಧೀರ್ ಅವರು ತುಮಕೂರಿನ ಮೂಕಾಂಬಿಕನಗರದ ನಿವಾಸಿ, ಸಿದ್ದಾರ್ಥ ಪಿಯು ಕಾಲೇಜಿನ ನಿವೃತ್ತ ಪ್ರಾಚಾರ್ಯ ಹೆಚ್.ಆರ್.ರಂಗನಾಥ್, ಸುನಂದಮ್ಮ ದಂಪತಿಯ ಪುತ್ರ.