ಜಿಲ್ಲೆ

ತುಮಕೂರು ಪಾಲಿಕೆ ಸದಸ್ಯರ ಜಾಲಿ ಟ್ರಿಪ್!

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಅಧ್ಯಯನ ಪ್ರವಾಸ ಹೆಸರಲ್ಲಿ ಮಹಾನಗರ ಪಾಲಿಕೆ ಸದಸ್ಯರು ಕುಟುಂಬ ಸಮೇತ ಜಾಲಿಟ್ರಿಪ್ ಹೊರಟಿದ್ದಾರೆ. 5 ದಿನಗಳ ಅಧ್ಯಯನ ಯಾತ್ರೆಯನ್ನು ಫೆ.2 ರಿಂದ ಕೈಗೊಂಡಿರುವ ಕಾರ್ಪೋರೇಟರ್‌ಗಳು 6 ರಂದು ಬೆಳಗಾಗುವುದರೊಳಗೆ ನಗರಕ್ಕೆ ಮರಳಲಿದ್ದಾರೆ.

ಮೇಯರ್ ಎಂ.ಪ್ರಭಾವತಿ ನೇತೃತ್ವದ 45 ಜನರ ತಂಡ ಇಂದೋರ್ ಹಾಗೂ ಉಜ್ಜಯಿನಿ ಪ್ರವಾಸ ಆರಂಭಿಸಿದೆ. ಈ ವೇಳೆ ವಿಧಿಸಿರುವ ಕೆಲವು ಷರತ್ತುಗಳನ್ನು ಉಲ್ಲಂಘಿಸಿ ಕಾರ್ಪೋರೇಟರ್‌ಗಳು ಕುಟುಂಬದ ಸದಸ್ಯರನ್ನು ಜತೆಗೆ ಕರೆದುಕೊಂಡು ಹೋಗಿರುವುದು ಪಾಲಿಕೆ ಪಡಸಾಲೆಯಲ್ಲಿ ಗುಸುಗುಸು ಚರ್ಚೆಗೆ ಗ್ರಾಸ ಒದಗಿಸಿದೆ.

ಪಾಲಿಕೆ ಮಹಿಳಾ ಸದಸ್ಯರ ಜತೆ ಪತಿರಾಯರು ವಿಮಾನವೇರಿದ್ದಾರೆ. ಅಲ್ಲದೆ, ಕೆಲವು ಸದಸ್ಯರು ಗೈರಾಗಿದ್ದು ಅವರ ಬದಲು ತಮ್ಮ ಪತ್ನಿಯರನ್ನು ಟ್ರಿಪ್ ಕಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಸದಸ್ಯರು ತಮ್ಮ ಪತ್ನಿಯರನ್ನು ಕರೆದುಕೊಂಡು ಜಾಲಿ ಟ್ರಿಪ್ ಖುಷಿ ಮೂಡ್‌ನಲ್ಲಿ ಗುರುವಾರ ಬೆಳಗಿನಜಾವ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ಹತ್ತಿ ಇಂದೋರ್ ಇಳಿದಿದ್ದಾರೆ.

ಮೇಯರ್ ಕಪ್ ಕ್ರೀಡಾಕೂಟದ ಯಶಸ್ವಿ ಸಂಘಟನೆ ಬಳಿಕ ಕಾರ್ಪೋರೇಟರ್‌ಗಳ ಈ ಟ್ರಿಪ್ ಹೆಸರಿಗಷ್ಟೇ ಅಧ್ಯಯನ ಪ್ರವಾಸ. ಇಂದೋರ್ ಪಾಲಿಕೆಗೆ ನೆಪಕ್ಕೆ ಭೇಟಿ ನೀಡಿ ಇನ್ನುಳಿದಂತೆ ಕುಟುಂಬದ ಸದಸ್ಯರ ಜತೆ ಸುತ್ತಾಡಿದ್ದಾರೆ. ಶುಕ್ರವಾರ ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ಕಾರಿಡರ್ ದರ್ಶನ ಮಾಡಲು ಕಾರ್ಪೋರೇಟರ್‌ಗಳ ತಂಡ ಉತ್ಸುಕವಾಗಿದೆ.

ಪತಿರಾಯರ ಸಂಭ್ರಮ:
ಮಹಿಳಾ ಸದಸ್ಯರ ಜತೆ ಪತಿರಾಯರು ಅಧ್ಯಯನ ಪ್ರವಾಸ ಹೊರಟಿದ್ದು ಅವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇದರ ಜತೆಗೆ ಸದಸ್ಯರು ತಮ್ಮ ಪತ್ನಿಯರ ಜತೆಗೆ ಫ್ಯಾಮಿಲಿ ಟ್ರಿಪ್‌ನಂತೆ ಭಾವಿಸಿ ಫೋಟೋಗಳಿಗೆ ನಗುಮೊಗದಲ್ಲಿ ಪೋಸ್ ಕೊಡುತ್ತಾ ಫೇಸ್‌ಬುಕ್‌ಗಳಲ್ಲಿ ಅಪ್‌ಲೋಡ್ ಮಾಡಿ ಸಡಗರ ಪಟ್ಟಿದ್ದಾರೆ.

ಕೆಲವು ಷರತ್ತುಗಳು:
ಅಧ್ಯಯನ ಪ್ರವಾಸಕ್ಕೆ ಹೊರಟಿರುವ ಕಾರ್ಪೋರೇಟರ್‌ಗಳು ಅನುಮತಿಸಿದ ಸ್ಥಳಗಳನ್ನು ಬಿಟ್ಟು ಬೇರೆ ಸ್ಥಳಗಳಿಗೆ ತೆರಳುವಂತಿಲ್ಲ. ಖರ್ಚು-ವೆಚ್ಚಗಳ ಮಾಹಿತಿಗಳ ದಾಖಲೆ, ರಸೀದಿ ಸಮೇತ ಪಾಲಿಕೆ ಲೆಕ್ಕ ಶಾಖೆಗೆ ಸಲ್ಲಿಸಬೇಕು. ಪ್ರವಾಸ ಕುರಿತು 15 ದಿನಗಳೊಳಗೆ ವಿವರವಾದ ವರದಿಯನ್ನು ಪಾಲಿಕೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕಿದೆ. ಈ ಪ್ರತಿಯನ್ನು ಸರ್ಕಾರ, ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸುವಂತೆ ಷರತ್ತು ವಿಧಿಸಲಾಗಿದೆ.