ಜಿಲ್ಲೆ

ಉದ್ದಿಮೆದಾರರ ಜೇಬಿಗೆ ಕತ್ತರಿ ; ತುಮಕೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ

ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಉದ್ದಿಮೆದಾರರ ಉದ್ದಿಮೆ ಪರವಾನಗಿ ದರ ಶೇ.5ರಷ್ಟು ಹೆಚ್ಚಳಕ್ಕೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿದ್ದು ಉದ್ದಿಮೆದಾರರ ಜೇಬಿಗೆ ಕತ್ತರಿ ಬೀಳಲಿದೆ.

ಪಾಲಿಕೆ ಸಭಾಂಗಣ ದಲ್ಲಿ ಮಂಗಳವಾರ ನಡೆದ ಸದಸ್ಯರ ವಿಶೇಷ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಆದಾಯ ಹೆಚ್ಚಿಸುವ ಅನಿವಾರ್ಯತೆ ಹಿನ್ನೆಲೆಯಲ್ಲಿ ಉದ್ದಿಮೆ ಪರವಾನಗಿ ತೆರಿಗೆಯಲ್ಲಿ ಶೇ.5ರಷ್ಟು ಹೆಚ್ಚಳ ಮಾಡುವಂತೆ ಸದಸ್ಯರು ಆಗ್ರಹಿಸಿದರು.

ಪಾಲಿಕೆ ವ್ಯಾಪ್ತಿಯ ಲ್ಲಿರುವ ಹಿಂದುಳಿದ ವರ್ಗಕ್ಕೆ ಸೇರಿದ ಮಡಿವಾಳ ಹಾಗೂ ಸವಿತಾ ಸಮಾಜ ಕಸುಬುಗಳಾದ ಕಟಿಂಗ್ ಶಾಪ್ (ಹೇರ್ ಡ್ರೆಸೆಸ್) ಹಾಗೂ ಐರನ್ ಅಂಗಡಿಗಳಿಗೆ (ಲಾಂಡ್ರಿ ಡ್ರೈಕ್ಲಿಂಗ್ ಶಾಫ್) ಪಾಲಿಕೆ ನೀಡುವ ಪರವಾನಗಿ ದರವನ್ನು ಶೇ.50 ರಿಯಾಯಿತಿ ದರದಲ್ಲಿ ಅನ್ವಯವಾಗುವಂತೆ ಉದ್ದಿಮೆ ರಹದಾರಿಯನ್ನು ನೀಡಲು ಸಭೆ ತೀರ್ಮಾನಿಸಿತು. ಅಲ್ಲದೇ ಕಡಿಮೆ ಆದಾಯ ಹೊಂದಿರುವ ಇತರ ಸಮುದಾಯದವರಿಗೂ ಈ ದರ ಅನ್ವಯವಾಗುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಆಯುಕ್ತರಿಗೆ ಸದಸ್ಯರೆಲ್ಲರೂ ಆಗ್ರಹಿಸಿದರು.

ಸದಸ್ಯರು ಪಾಲಿಕೆ ಗಮನಕ್ಕೆ ತರುವ ಎಲ್ಲ ಸಮಸ್ಯೆಗಳಿಗೆ ಆದ್ಯತೆ ಮೇಲೆ ಸ್ಪಂದಿಸಿ ಬಗೆಹರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ ಮೇಯರ್ ಫರೀದಾ ಬೇಗಂ, ಬಡವರಿಗೆ ಅನುಕೂಲವಾಗುವಂತಹ ಸೌಲಭ್ಯಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಂಡು ಕಾರ್ಯಗತಗೊಳಿಸಿದಾಗ ಮಾತ್ರ ಸಭೆಗಳಿಗೆ ಅರ್ಥ ಬರುತ್ತದೆ ಎಂದರು.

ಪಾಲಿಕೆ ಕೆಲಸ ಕಾರ್ಯಗಳನ್ನು ಕಾನೂನು ಚೌಕಟ್ಟಿಯಲ್ಲಿಯೇ ನಿರ್ವಹಿಸಬೇಕಾಗುತ್ತದೆ. ಸಾರ್ವಜನಿಕರಿಗೆ ಅನುಕೂಲವಾಗುವ ಕಾರ್ಯಗಳನ್ನು ಮಾಡುವುದು ನಮ್ಮ ಜವಾಬ್ದಾರಿ. ಇದಕ್ಕೆ ಎಲ್ಲ ಸದಸ್ಯರು ಸಹಕಾರ ನೀಡಬೇಕೆಂದು ಆಯುಕ್ತೆ ರೇಣುಕಾ ಮನವಿ ಮಾಡಿದರು. ಉಪಮೇಯರ್ ಶಶಿಕಲಾ, ತೆರಿಗೆ ನಿರ್ಧರಣೆ ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್, ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಹಾಗೂ ಸದಸ್ಯರು ಇದ್ದರು.

ಶಿಥಿಲಾವಸ್ಥೆಯಲ್ಲಿ ಕಂಬಗಳು: ಪಾಲಿಕೆ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ವಿದ್ಯುತ್ ಕಂಬಗಳನ್ನು ಕೂಡಲೇ ತೆರವುಗೊಳಿಸಿ ಹೊಸ ಕಂಬಗಳನ್ನು ನೆಡಬೇಕು. ಎಷ್ಟೋ ಕಡೆ ಕಂಬಗಳು ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದ್ದರೂ ಬೆಸ್ಕಾಂ ಗಮನಹರಿಸುತ್ತಿಲ್ಲ. ಅವಘಡಗಳಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ಸದಸ್ಯರು ಒತ್ತಾಯಿಸಿದರು.

ಮಹಾನಗರ ಪಾಲಿಕೆಗೆ ಸೂಪರ್‌ಸೀಡ್ ಗುಮ್ಮ: ಪಾಲಿಕೆ ವ್ಯಾಪಿಯಲ್ಲಿ ತೆರಿಗೆ ಹೆಚ್ಚಿಸಲು ವಿರೋಧ ವ್ಯಕ್ತಪಡಿಸಿದರೆ ಸದಸ್ಯರಿಗೆ ಸರ್ಕಾರ ಸೂಪರ್‌ಸೀಡ್ ಮಾಡುವ ಬೆದರಿಕೆ ಒಡ್ಡುತ್ತಿದೆ ಎಂದು ಕಾಂಗ್ರೆಸ್ ಸದಸ್ಯ ಸೈಯದ್ ನಯಾಜ್ ಸಭೆಯಲ್ಲಿಯೇ ಆರೋಪಿಸಿದರು. ಕರೊನಾ ಸೋಂಕು ಹರಡುವಿಕೆ ಭೀತಿ ನಡುವೆ ತೆರಿಗೆ ಹೆಚ್ಚಳ ಮಾಡಬಾರದು, ಇದರಿಂದ ಸಾರ್ವಜನಿಕರ ಮೇಲೆ ಸಾಕಷ್ಟು ಒತ್ತಡ ಬೀಳಲಿದೆ ಎಂದು ಇತ್ತೀಚೆಗೆ ನಡೆದ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಹೇಳಿದರೂ ಕೇಳದ ಅಧಿಕಾರಿಗಳು, ಈಗ ಪಾಲಿಕೆ ಆದಾಯ ಹೆಚ್ಚಿಸಿಕೊಳ್ಳಲು ಜನಸಾಮಾನ್ಯರ ಮೇಲೆ ಬರೆ ಎಳೆಯುತ್ತಿದ್ದಾರೆ ಎಂದು ಹರಿಹಾಯ್ದರು.ಅಧಿಕಾರಿ ನಾಗರಾಜ್‌ರನ್ನು ತರಾಟೆಗೆ ತೆಗೆದುಕೊಂಡ ಎಲ್ಲ ಸದಸ್ಯರು ಕ್ರಮಜರುಗಿಸುವ ಎಚ್ಚರಿಕೆ ನೀಡಿದರಾದರೂ ಯಾವ ಅಧಿಕಾರಿಯೂ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ. ಸೂಪರ್‌ಸೀಡ್ ಗುಮ್ಮ ಬಿಟ್ಟು ಪಾಲಿಕೆ ಆಡಳಿತದಲ್ಲಿ ಅಧಿಕಾರಿಗಳು ಹಸ್ತಕ್ಷೇಪ ಮಾಡಿದರೆ ಸಹಿಸುವುದಿಲ್ಲ ಎಂದು ಮೇಯರ್ ಫಾತಿಮಾಬೇಗಂ ಕೂಡ ಅಸಮದಾನ ವ್ಯಕ್ತಪಡಿಸಿದರು.

ರಸ್ತೆ ಅಗೆದವರಿಂದ ತೆರಿಗೆ ಸಂಗ್ರಹಿಸಿ: ಸ್ಮಾರ್ಟ್‌ಸಿಟಿ, ಬೆಸ್ಕಾಂ ವಿವಿಧ ಇಲಾಖೆಗಳ ಯೋಜನೆಯಡಿ ನಗರದಲ್ಲಿ ಈಗಾಗಲೇ ಕೈಗೊಂಡಿರುವ ಕಾಮಗಾರಿಗಳಾದ ಗ್ಯಾಸ್‌ಲೈನ್, ಪೈಪ್‌ಲೈನ್, ವಿದ್ಯುತ್ ಪರಿವರ್ತಕಗಳ ಅಳವಡಿಕೆಗಾಗಿ ರಸ್ತೆಗಳನ್ನು ಅಗೆದು ದುರಸ್ತಿಗೊಳಿಸಿದ್ದಾರೆ. ಇವರಿಂದ ಪಾಲಿಕೆ ತೆರಿಗೆ ಸಂಗ್ರಹಿಸಬೇಕು ಎಂದು ಸದಸ್ಯ ಕುಮಾರ್ ಆಯುಕ್ತರ ಗಮನಕ್ಕೆ ತಂದರು.

ಅನುಮತಿ ಅಗತ್ಯ: ಪಾಲಿಕೆ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪಿಸುವಂತೆ ಕೆಲ ಸದಸ್ಯರ ಮನವಿಗೆ ಪ್ರತಿಕ್ರಿಯಿಸಿದ ಆಯುಕ್ತೆ ರೇಣುಕಾ, ಯಾವುದೇ ಪುತ್ಥಳಿ ಸ್ಥಾಪಿಸಲು ಸರ್ಕಾರದ ಅನುಮತಿ ಅಗತ್ಯವಾಗಿದ್ದು ಪತ್ರಬರೆದು ಅನುಮತಿ ಕೋರಬೇಕು ಎಂದು ತಿಳಿಸಿದರು.