ಜಿಲ್ಲೆ

6 ತಿಂಗಳಲ್ಲಿ ತುಮಕೂರು-ನೆಲಮಂಗಲ 6 ಪಥದ ರಸ್ತೆ ಪೂರ್ಣ

ತುಮಕೂರು: ತುಮಕೂರು ಹಾಗೂ ಬೆಂಗಳೂರು ನಡುವೆ ಸಂಚಾರ ದಟ್ಟಣೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನೆಲಮಂಗಲ ಹಾಗೂ ತುಮಕೂರು ನಡುವೆ 6 ಪಥದ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.

ತುರುವೇಕೆರೆ ತಾಲೂಕು ಸಂಪಿಗೆ ರಸ್ತೆ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ರೈಲ್ವೇ ನಿಲ್ದಾಣ ಪರಿವೀಕ್ಷಣೆ ಹಾಗೂ ಯಶವಂತಪುರ-ಚಿಕ್ಕಮಗಳೂರು ಎಕ್ಸ್​ಪ್ರೆಸ್​ ಹೆಚ್ಚುವರಿ ರೈಲು ನಿಲುಗಡೆಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರೈಲ್ವೇಹಾಗೂ ಹೆದ್ದಾರಿ ಕಾಮಗಾರಿಗಳಿಗೂಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದರು.

ಸಂಪಿಗೆ ರೋಡ್​ ರೈಲ್ವೆ ನಿಲ್ದಾಣದಲ್ಲಿಹೆಚ್ಚು ಪ್ರಯಾಣಿಕರು ಸಂಚರಿಸುವುದರಿಂದ ಎಕ್ಸ್​ಪ್ರೆಸ್​ ರೈಲುಗಳನ್ನೂ ಹೆಚ್ಚುವರಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದ್ದು, ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಯಶವಂತಪುರ ಮತ್ತು ಚಿಕ್ಕಮಗಳೂರು ನಡುವೆ ಸಂಚರಿಸುವ ಎಕ್ಸ್​ಪ್ರೆಸ್​ ರೈಲು ಸಂಪಿಗೆ ರೋಡ್​ ರೈಲ್ವೆ ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆಗೆ ಇಂದಿನಿಂದ ಅವಕಾಶ ಕಲ್ಪಿಸಲಾಗಿದೆ ಎಂದರು.

ಹೆಚ್ಚುವರಿ ನಿಲುಗಡೆಯು ಸಂಪಿಗೆ ರೋಡ್​ ರೈಲ್ವೆ ನಿಲ್ದಾಣದಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆಯಲ್ಲದೆ ಈ ಪ್ರದೇಶದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದರು.

ಶಾಸಕ ಎಂ.ಟಿ.ಕೃಷ್ಣಪ್ಪ, ಬಿ.ಸುರೇಶ್​ಗೌಡ, ಜಿ.ಬಿ.ಜ್ಯೋತಿಗಣೇಶ್​, ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಯೋಗೇಶ್​ ಮೋಹನ್​, ನೈರುತ್ಯ ರೈಲ್ವೆ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಡಾ.ಅನೂಪ್​ ದಯಾನಂದ ಸಾಧು, ಕಾರ್ಯಕ್ರಮದ ವ್ಯವಸ್ಥಾಪಕ ಎಚ್​.ಎನ್​.ಶ್ರೀನಿವಾಸ್​, ಮಾಜಿ ಶಾಸಕ ಮಸಲ ಜಯರಾಮ್​ ಮತ್ತಿತರರು ಇದ್ದರು.