ಜಿಲ್ಲೆ

ಮೋದಿ ಕಂಡು ಪುಳಕಿತರಾದ ತುಮಕೂರು ಜನ

ತುಮಕೂರು: ಚುನಾವಣಾ ಪ್ರಚಾರಕ್ಕಾಗಿ ತುಮಕೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರಮೋದಿ ಅವರನ್ನು ಕಣ್ತುಂಬಿಕೊಳ್ಳಲು ಶುಕ್ರವಾರ ನಗರದ ಬಿ.ಎಚ್.ರಸ್ತೆಯುದ್ದಕ್ಕೂ ಜನಸಾಗರವೇ ಹರಿದುಬಂದಿತ್ತು.

ಪ್ರಧಾನಿ ನರೇಂದ್ರಮೋದಿ ಅವರಿದ್ದ ಕಾರು ತುಮಕೂರು ವಿವಿ ಹೆಲಿಪ್ಯಾಡ್‌ನಿಂದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದವರೆಗೂ ಸಂಚರಿಸಲಿದೆ ಎಂಬುದನ್ನು ಪೂರ್ವದಲ್ಲಿಯೇ ಅರಿತಿದ್ದ ನಗರವಾಸಿಗಳೆಲ್ಲರೂ ರಸ್ತೆಯ ತುಂಬೆಲ್ಲಾ ಕಿಕ್ಕಿರಿದು ನಿಂತಿದ್ದರು.

ಬಿಜೆಪಿ ವತಿಯಿಂದ ರೋಡ್‌ಶೋಗೆ ಯಾವುದೇ ಪೂರ್ವಸಿದ್ಧತೆ ಮಾಡಿಕೊಳ್ಳದಿದ್ದರೂ ಸಾವಿರಾರು ಜನರನ್ನು ಕಂಡ ಪ್ರಧಾನಿಯವರೇ ತಾವೇ ಖುದ್ದು ಕಾರಿನಲ್ಲಿಯೇ ಎದ್ದುನಿಂತು ನೆರೆದಿದ್ದವರ ಕಡೆಗೆ ಎಂದಿನ ಶೈಲಿಯಲ್ಲಿಯೇ ಕೈ ಬೀಸಿದಾಗ ಪುಳಕಿತರಾದ ಜನರು ಘೋಷಣೆಗಳನ್ನು ಮೊಳಗಿಸಿದರು.