*ಎಸ್.ಆರ್.ಗೌಡ ವಿರುದ್ಧ ಗೆಲುವು * ಕಾಂಗ್ರೆಸ್ನಿಂದಲೂ ಒಂದು ಅಡ್ಡ ಮತ *ಸಹಕಾರ ಸಚಿವ ಕೆಎನ್ಆರ್ ಮೇಲುಗೈ
ತುಮಕೂರು: ತೀವ್ರ ಕುತೂಹಲ ಮೂಡಿಸಿದ್ದ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ(ತುಮುಲ್) ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಶಾಸಕ ಎಚ್.ವಿ.ವೆಂಕಟೇಶ್ ನಿರೀಕ್ಷೆಯಂತೆಯೇ ಆಯ್ಕೆಯಾದರು. ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಇತಿಹಾಸ ಬರೆದರು.
ಮಲ್ಲಸಂದ್ರದ ತುಮುಲ್ ಕಚೇರಿಯಲ್ಲಿ ನಡೆದು ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಎಚ್.ವಿ.ವೆಂಕಟೇಶ್ ಹಾಗೂ ಎನ್ಡಿಎ ಬೆಂಬಲಿತ ಎಸ್.ಆರ್.ಗೌಡ ನಾಮಪತ್ರ ಸಲ್ಲಿಸಿದ್ದರು. ನಿಗದಿತ ಸಮಯವಾದರೂ ಯಾರೊಬ್ಬರೂ ನಾಮಪತ್ರ ವಾಪಸ್ ಪಡೆಯದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಚುನಾವಣೆ ಪ್ರಕ್ರಿಯೆ ಮುಂದುವರೆಸಿದರು, ನಂತರ ಗೌಪ್ಯ ಮತದಾನ ನಡೆಯಿತು.
ಎಚ್.ವಿ.ವೆಂಕಟೇಶ್ ಪರವಾಗಿ 9 ಹಾಗೂ ಎಸ್.ಆರ್.ಗೌಡ ಪರವಾಗಿ 5 ಮತಗಳು ಚಲಾವಣೆಗೊಂಡ ಹಿನ್ನೆಲೆಯಲ್ಲಿ ವೆಂಕಟೇಶ್ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ನಾಮನಿರ್ದೇಶಿತ ಸದಸ್ಯರೊಬ್ಬರು ತುಮುಲ್ಗೆ ಅಧ್ಯಕ್ಷರಾದ ಮೊದಲಿಗರೆನ್ನಿಸಿಕೊಂಡರು. ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ 10 ನಿರ್ದೇಶಕರ ಜತೆಗೆ ಪದನಿಮಿತ್ತ 5 ಸದಸ್ಯರು ಸೇರಿ 15 ಸದಸ್ಯರಿಗೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು.
ಎನ್ಡಿಡಿಬಿ ಪ್ರತಿನಿಧಿ ಗೈರಾದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ 14 ಮತಗಳು ಚಲಾವಣೆಯಾಗಿದ್ದು 9 - 5ಅಂತರದಲ್ಲಿ ಕಾಂಗ್ರೆಸ್ ಬೆಂಬಲ ವೆಂಕಟೇಶ್ಗೆ ಅಧ್ಯಕ್ಷ ಸ್ಥಾನ ನಿರಾಯಾಸವಾಗಿ ಒಲಿದು ಬಂದಿತು. ಎನ್ಡಿಎ 3 ಸದಸ್ಯರನ್ನು ಹೊಂದಿದ್ದು ಎಸ್.ಆರ್.ಗೌಡ ಪಡೆದಿರುವ 5 ಮತಗಳು ಗೌಪ್ಯವಾಗಿದ್ದ ಮತದಾನದಲ್ಲಿ ಹೆಚ್ಚುವರಿ ಎರಡು ಮತಗಳನ್ನು ಯಾರು ಚಲಾಯಿಸಿರಬಹುದು ಎಂಬ ಬಗ್ಗೆಯೂ ಕುತೂಹಲ ಸೃಷ್ಠಿಯಾಯಿತು.
ಎಚ್.ವಿ.ವೆಂಕಟೇಶ್ ಆಯ್ಕೆ ಅನಿರೀಕ್ಷಿತ ಎನ್ನಿಸಿದ್ದು ಈ ಆಯ್ಕೆಯ ಹಿಂದೆ ರಾಜ್ಯ ರಾಜಕಾರಣದ ಜತೆಗೂ ನಂಟಿದೆ ಎಂಬ ಮಾತಿದೆ, ಕುಣಿಗಲ್ ಶಾಸಕರಿಗೆ ಅಧಿಕಾರ ತಪ್ಪಿಸಲು ಪಾವಗಡ ಶಾಸಕರ ಹೆಸರನ್ನು ತೆಗೆದುಕೊಂಡು ಸಹಕಾರ ಸಚಿವ ಕೆ.ಎನ್.ರಾಜಣ್ಣ ನಡೆಸಿರುವ ರಾಜಕೀಯ ತಂತ್ರಗಾರಿಕೆ ಜಿಲ್ಲಾ ಕಾಂಗ್ರೆಸ್ನಲ್ಲಿಯೇ ಎರಡು ಬಣ ಸೃಷ್ಠಿಸಿರುವುದನ್ನು ತಳ್ಳಿಹಾಕಲಾಗದು.