ಜಿಲ್ಲೆ

ತುಮುಲ್ ಚುನಾವಣೆಗೆ ಮೀನ-ಮೇಷ

ಜಗನ್ನಾಥ್ ಕಾಳೇನಹಳ್ಳಿ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಜಿಲ್ಲೆಯ ಪ್ರತಿಷ್ಠಿತ ತುಮಕೂರು ಹಾಲು ಒಕ್ಕೂಟ(ತುಮುಲ್)ದ ನಿರ್ದೇಶಕ ಮಂಡಳಿ ಚುನಾವಣೆ ನನೆಗುದಿಗೆ ಬಿದ್ದಿದೆ. ಕಳೆದ ಅಕ್ಟೋಬರ್ 29ಕ್ಕೆ ಆಡಳಿತ ಮಂಡಳಿ ಅವಧಿ ಅಂತ್ಯಗೊಂಡಿದೆಯಾರೂ 3 ತಿಂಗಳಾದರೂ ಚುನಾವಣೆ ಸುಳಿವೇ ಕಾಣುತ್ತಿಲ್ಲ. ಆಡಳಿತಾಧಿಕಾರಿ ನೇಮಿಸಲಾಗಿದ್ದು ಕಾನೂನು ತೊಡಕನ್ನು ನೆಪ ಮಾಡಿಕೊಂಡು ಚುನಾವಣೆ ನಡೆಸಲು ಮೀನ-ಮೇಷ ಎಣಿಸಲಾಗುತ್ತಿದೆ.

ಸಹಕಾರ ಸಚಿವ ಕೆ.ಎನ್.ರಾಜಣ್ಣರ ತವರು ಜಿಲ್ಲೆಯಲ್ಲಿನ ಹಾಲು ಒಕ್ಕೂಟವು ರಾಜ್ಯದ ಪ್ರತಿಷ್ಠಿತ ಹಾಲು ಒಕ್ಕೂಟಗಳಲ್ಲಿ ಒಂದಾಗಿದೆ. 1324 ಹಾಲು ಉತ್ಪಾದಕರ ಸಂಘಗಳನ್ನು ಹೊಂದಿರುವ ‘ತುಮುಲ್’ನಲ್ಲಿ ಈ ಹಿಂದಿನ ಅವಧಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಈ ಬಾರಿ ಸಹಕಾರ ಸಚಿವರ ಜಿಲ್ಲೆಯವರೇ ಆಗಿರುವುದರಿಂದ ‘ತುಮುಲ್’ ಚುನಾವಣೆ ಸಾಕಷ್ಟು ಕುತೂಹಲ ಪಡೆದುಕೊಂಡಿದೆ. ತುಮುಲ್ ಅನ್ನು ‘ಕೈ’ತೆಕ್ಕೆಗೆ ತೆಗೆದುಕೊಳ್ಳಲು ಸಚಿವ ರಾಜಣ್ಣ ಈಗಾಗಲೇ ದಾಳ ಉರುಳಿಸಿದ್ದಾರೆ ಎನ್ನಲಾಗಿದೆ.

10 ನಿರ್ದೇಶಕ ಸ್ಥಾನ: ಈ ಹಿಂದಿನ ಚುನಾಯಿತ ನಿರ್ದೇಶಕ ಮಂಡಳಿಯ ಆಡಳಿತಾವಧಿ ಅಕ್ಟೋಬರ್ 29ಕ್ಕೆ ಅಂತ್ಯಗೊಂಡಿದ್ದು ಇನ್ನೂ ಚುನಾವಣೆ ಘೋಷಣೆ ಆಗಿಲ್ಲ. ಜಿಲ್ಲೆಯ ತುಮಕೂರು, ತಿಪಟೂರು, ಶಿರಾ, ಮಧುಗಿರಿ, ಕೊರಟಗೆರೆ, ಪಾವಗಡ, ಚಿಕ್ಕನಾಯಕನಹಳ್ಳಿ, ಕುಣಿಗಲ್, ಗುಬ್ಬಿ ಹಾಗೂ ತುರುವೇಕೆರೆ 10 ತಾಲೂಕುಗಳಿಂದ ತಲಾ ಓರ್ವರಂತೆ 10 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ. 1324 ಹಾಲು ಉತ್ಪಾದಕರ ಸಂಘಗಳಿದ್ದು 1283 ಡೇರಿಗಳು ಕಾರ್ಯನಿರತವಾಗಿವೆ. ಇದರಲ್ಲಿ 323 ಮಹಿಳೆಯರ ಸಾರಥ್ಯದ ಹಾಲು ಉತ್ಪಾದಕರ ಸಂಘಗಳಿರುವುದು ವಿಶೇಷವೆನಿಸಿದೆ.

10 ತಾಲೂಕು ವ್ಯಾಪ್ತಿಯಲ್ಲಿ ಚುನಾವಣೆ ನಡೆಯುವುದರಿಂದ ಸಹಜವಾಗಿ ತುಮುಲ್ ಮೇಲೆ ಹಿಡಿತ ಸಾಧಿಸುವುದು ಮೂರು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆ ಎನಿಸಲಿದೆ. ಇದು ಮುಂಬರುವ ಸ್ಥಳೀಯ ಸಂಸ್ಥೆಗಳಿಗೆ ರಾಜಕೀಯ ದಿಕ್ಸೂಚಿ ಕೂಡ ಆಗಲಿದೆ.

ಕೆಎನ್ನಾರ್ ಕಣ್ಣು ! ಸಹಕಾರ ಸಚಿವ ಕೆ.ಎನ್.ರಾಜಣ್ಣ ತುಮುಲ್ ಮೇಲೆ ಹಿಡಿತ ಸಾಧಿಸಲು ಹೊರಟಿದ್ದು ತಮ್ಮ ಪತ್ನಿ ಜಿಪಂ ಮಾಜಿ ಅಧ್ಯಕ್ಷೆ ಶಾಂತಲಾರಾಜಣ್ಣರನ್ನೇ ಅಧ್ಯಕ್ಷರನ್ನಾಗಿಸಲು ತೆರೆಮರೆಯಲ್ಲಿ ರಾಜಕೀಯ ಕಸರತ್ತು ನಡೆಸಿದ್ದಾರೆ ಎನ್ನುವ ವದಂತಿ ಎಲ್ಲೆಡೆ ಹಬ್ಬಿದೆ. ಈ ಸುದ್ದಿ ಎಷ್ಟರ ಮಟ್ಟಿಗೆ ಸತ್ಯ ಎಂಬುದು ಕಾಲವೇ ನಿರ್ಣಯಿಸಲಿದೆ. ಕೊಂಡವಾಡಿಗೆ ಕೋರ್ಟ್ ನಿಶಾನೆ ಒಂದು ಕಾಲದಲ್ಲಿ ಕೆಎನ್ನಾರ್ ಪರಮಾಪ್ತರೆನಿಸಿದ್ದ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಜೆಡಿಎಸ್‌ಗೆ ಪಕ್ಷಾಂತರ ಮಾಡಿದ ಬಳಿಕ ಅವರನ್ನು ತುಮುಲ್‌ನಿಂದ ಹೊರಗಿಡುವ ಪ್ರಯತ್ನ ನಡೆದಿತ್ತು. ಹಾಗಾಗಿ, ಅವರ ಸದಸ್ಯತ್ವವನ್ನೇ ಅಸಿಂಧುಗೊಳಿಸಿ ಚುನಾವಣೆಗೆ ನಿಲ್ಲದಂತೆ ಮಾಡಲಾಗಿತ್ತು. ಹೈಕೋರ್ಟ್‌ನಲ್ಲಿ ಹೋರಾಟ ನಡೆಸಿದ್ದು ಮುಂದಿನ ಚುನಾವಣೆಗೆ ನಿಲ್ಲುವ ಅವಕಾಶವನ್ನು ಕೊಂಡವಾಡಿ ಪಡೆದುಕೊಂಡಿದ್ದು ತುಮುಲ್ ಚುನಾವಣೆ ಈ ಬಾರಿ ಜಿದ್ದಾಜಿದ್ದಿ ಕಣವಾಗಿಸಲಿದೆ.