ಜಿಲ್ಲೆ

ಪತ್ನಿ, ಮೂವರು ಮಕ್ಕಳ ಮೇಲೆ ಪೆಟ್ರೋಲ್ ಸುರಿದು ಪತಿಯೇ ಬೆಂಕಿ ಹಚ್ಚಿದ

ಮಧುಗಿರಿ: ಕೌಟುಂಬಿಕ ಜಗಳ ವಿಕೋಪಕ್ಕೆ ತಿರುಗಿ ಪತಿಯೇ ತನ್ನ ಪತ್ನಿ ಹಾಗೂ ಮೂವರು ಮಕ್ಕಳ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆಯಲ್ಲಿ ಮನೆಯೊಡತಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಮುದ್ದನೇರಳೆಕೆರೆಯಲ್ಲಿ ಸೋಮವಾರ ಬೆಳಗ್ಗೆ ವರದಿಯಾಗಿದೆ.

ಪತಿಯೇ ಆತನ ಪತ್ನಿ ಹಾಗೂ ಮೂವರು ಮಕ್ಕಳ ಮೈಮೇಲೆ ಪೆಟ್ರೋಲ್ ಸುರಿದು ಕೊಲೆಗೈಯಲು ಯತ್ನಿಸಿದ್ದಾನೆ ಎಂದು ಮಡಿಗೇಶಿ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.

ದಂಪತಿ ಭಾನುವಾರ ತಡರಾತ್ರಿಯವರೆಗೂ ಜಗಳವಾಡಿಕೊಂಡ ಬಗ್ಗೆ ಸ್ಥಳೀಯರಿಗೂ ಮಾಹಿತಿಯಿದೆ, ಸೋಮವಾರ ಬೆಳಗ್ಗೆ ಮಕ್ಕಳು ಮಲಗಿದ್ದಾಗ ಮನೆಯ ತುಂಬೆಲ್ಲಾ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಘಟನೆಯಲ್ಲಿ ಶಾಂತಮ್ಮ(40) ಮೃತಪಟ್ಟಿದ್ದು ಮಕ್ಕಳಾದ ಅಕ್ಷ ಯ(17) ಅಕ್ಷತಾ(13) ಮತ್ತು ಅಮೃತ (10)ಗೂ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಕಾರಣನಾಗಿರುವ ರಾಮಾಂಜಿನಪ್ಪ(45) ತಲೆ ಮರೆಸಿಕೊಂಡಿದ್ದಾನೆ.

ಕ್ಷುಲ್ಲಕ ಕಾರಣಕ್ಕೆ ಭಾನುವಾರ ರಾತ್ರಿಯೆಲ್ಲಾ ಕಿತ್ತಾಡಿಕೊಂಡಿದ್ದ ದಂಪತಿ ಸೋಮವಾರ ನಡುಕಿನ 3ರ ಸಮಯದಲ್ಲಿ ಮಲಗಿದ್ದಾಗ ರಾಮಾಂಜಿನಪ್ಪ ಈ ದೃಷ್ಕೃತ್ಯ ಎಸಗಿದ್ದಾನೆ ಎಂದು ಶಾಂತಮ್ಮ ಸಂಬಂಧಿಕರು ಠಾಣೆಯಲ್ಲಿ ದೂರು ನೀಡಿದ್ದಾರೆ.