ಜಿಲ್ಲೆ

ಹೆಬ್ಬಾಕ ರವಿಗೆ ಮತ್ತೆ ಬಿಜೆಪಿ ಸಾರಥ್ಯ

ವಿಶೇಷ ವರದಿ

ತುಮಕೂರು/ಮಧುಗಿರಿ

ತುಮಕೂರು, ಮಧುಗಿರಿ ಬಿಜೆಪಿ ಸಂಘಟನಾತ್ಮಕ ಅವಳಿ ಜಿಲ್ಲೆಗಳಲ್ಲಿ ಯುವಕರ ಹೆಗಲಿಗೆ ಸಂಘಟನೆಯ ಜವಾಬ್ದಾರಿಯನ್ನು ವಹಿಸಲಾಗಿದೆ. ಒಂದೂವರೆ ವರ್ಷ ತುಮಕೂರು ಸಂಘಟನಾತ್ಮಕ ಜಿಲ್ಲೆಯ ಸಾರಥ್ಯವಹಿಸಿದ್ದ ಎಚ್.ಎಸ್.ರವಿಶಂಕರ್ (ಹೆಬ್ಬಾಕರವಿ) ಅವರನ್ನೇ ಮತ್ತೊಂದು ಅವಧಿಗೆ ಮುಂದುವರೆಸಲಾಗಿದೆ. ಇನ್ನೂ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಅಧ್ಯಕ್ಷರಾಗಿ ಬಿ.ಸಿ . ಹನುಮಂತೇಗೌಡರನ್ನು ನೇಮಿಸಿದ್ದು ಅತೀ ಕಿರಿಯ ವಯಸ್ಸಿಗೆ ಗೌಡರಿಗೆ ಜಿಲ್ಲಾಧ್ಯಕ್ಷ ಸ್ಥಾನ ಒಲಿದು ಬಂದಿದೆ.

ಈ ಹಿಂದೆ ಲಕ್ಷ್ಮೀಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮೇ 2022ರಲ್ಲಿ ನೇಮಕಗೊಂಡಿದ್ದ ರವಿಶಂಕರ್ ಇತ್ತೀಚೆಗೆ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕಗೊಂಡ ಬಳಿಕ ಸಹಜವಾಗಿ ಎಲ್ಲಾ ಘಟಕಗಳನ್ನು ಪುನಾರಚಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ತಮ್ಮನ್ನೇ ಮುಂದುವರೆಸುವಂತೆ ಮನವಿ ಮಾಡಿಕೊಂಡಿದ್ದರು. ಅಲ್ಲದೆ, ಬಹುಮತದ ಅಭಿಪ್ರಾಯದಂತೆ ರವಿಶಂಕರ್‌ಗೆ ವರಿಷ್ಠರು ಮಣೆ ಹಾಕಿದ್ದಾರೆ ಎನ್ನಲಾಗಿದೆ.

ಮೂರು ಬಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ನಿಭಾಯಿಸಿದ್ದ ಹೆಬ್ಬಾಕರವಿ ಕೆಜೆಪಿ ಜಿಲ್ಲಾಧ್ಯಕ್ಷರಾಗಿಯು ಸೇವೆ ಸಲ್ಲಿಸಿದ್ದರು. ಬಿಜೆಪಿ ಪ್ರಬಲವಾಗಿ ನೆಚ್ಚಿಕೊಂಡಿರುವ ಲಿಂಗಾಯತ ಸಮುದಾಯಕ್ಕೆ ಸೇರಿದ ರವಿಶಂಕರ್ ಪಕ್ಷ ಸಂಘಟನೆ, ಚುನಾವಣೆ ಸಂದರ್ಭದಲ್ಲಿ ಪಕ್ಷ ಮುನ್ನಡೆಸಿದ ಅನುಭವವುಳ್ಳವರಾಗಿದ್ದು ಈಗ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತ್ತೊಂದು ಬಾರಿ ಪಕ್ಷ ಮುನ್ನಡೆಸುವ ಹೊಣೆಗಾರಿಕೆ ಪಡೆದಿದ್ದಾರೆ.

ತುಮಕೂರು ಸಂಘಟನಾತ್ಮಕ ಜಿಲ್ಲೆ ವ್ಯಾಪ್ತಿಗೆ ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಕುಣಿಗಲ್, ಗುಬ್ಬಿ, ತುಮಕೂರು ನಗರ, ಗ್ರಾಮಾಂತರ ಕ್ಷೇತ್ರಗಳು ಒಳಪಡಲಿದ್ದು ಕುಣಿಗಲ್ ಹೊರತು ಪಡಿಸಿ ಇನ್ನೆಲ್ಲಾ ಕ್ಷೇತ್ರಗಳು ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡಲಿವೆ. ಜೆಡಿಎಸ್-2, ಬಿಜೆಪಿ-2 ಕ್ಷೇತ್ರಗಳಲ್ಲಿ ತನ್ನ ಶಾಸಕರನ್ನು ಹೊಂದಿದ್ದು ಉಭಯಪಕ್ಷಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾ ಸವಾಲಿದೆ. ಹಾಗಾಗಿ, ತುಮಕೂರು ಲೋಕ ಚುನಾವಣೆಯಲ್ಲಿ ಪಕ್ಷ ಸಂಘಟನೆ ಬಹುದೊಡ್ಡ ಜವಾಬ್ದಾರಿಯು ಕೂಡ ಅಧ್ಯಕ್ಷರ ಮೇಲಿರಲಿದೆ.

ಕಿರಿಯವಯಸ್ಸಿನ ಸಾರಥಿ: ಪ್ರಬಲ ಕುಂಚಿಟಿಗ ಸಮುದಾಯಕ್ಕೆ ಸೇರಿದ ಹನುಮಂತೇಗೌಡಗೆ ಕಿರಿಯ ವಯಸ್ಸಿನಲ್ಲೇ ಪಕ್ಷದ ಸಾರಥ್ಯ ನೀಡಲಾಗಿದೆ. ಮಧುಗಿರಿ ಸಂಘಟನಾತ್ಮಕ ಜಿಲ್ಲೆ ವ್ಯಾಪ್ತಿಯ ಶಿರಾ, ಮಧುಗಿರಿ, ಕೊರಟಗೆರೆಯಲ್ಲಿ ಕುಂಚಿಟಿಗ ಸಮುದಾಯ ಪ್ರಬಲವಾಗಿದ್ದು ಈ ಹಿನ್ನೆಲೆಯಲ್ಲಿ ಕುಂಚಿಟಿಗ ಜನಾಂಗಕ್ಕೆ ಸಾಮಾಜಿಕ ನ್ಯಾಯ, ರಾಜಕೀಯ ಪ್ರಾಧಿನಿತ್ಯ ನೀಡಲಾಗಿದೆ ಎನ್ನುವ ವಿಶ್ಲೇಷಣೆ ಕೇಳಿಬರುತ್ತಿದೆ.

ಮಧುಗಿರಿ ಸಂಘಟನಾತ್ಮಕ ಜಿಲ್ಲೆಯಲ್ಲಿ ಬಿಜೆಪಿ ಬಲಹೀನವಾಗಿದೆಯಾದರೂ ಕಳೆದ ಲೋಕಸಭಾ ಚುನಾವಣೆ ವೇಳೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ (ಮಧುಗಿರಿ, ಕೊರಟಗೆರೆ) ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರ (ಶಿರಾ, ಪಾವಗಡ)ದಲ್ಲಿ ಬಿಜೆಪಿ ಮ್ಯಾಚಿಕ್ ಮಾಡಿತ್ತು. ಮಧುಗಿರಿಯಲ್ಲಿ ಬಿಜೆಪಿ ಲೀಡ್ ಪಡೆದಿತ್ತು. ಇನ್ನೂ ಚಿತ್ರದುರ್ಗ ಕ್ಷೇತ್ರ ವ್ಯಾಪ್ತಿಯ ಶಿರಾದಲ್ಲು ಬಿಜೆಪಿಗೆ ಮುನ್ನಡೆ ಸಿಕ್ಕಿತ್ತು. ಹಾಗಾಗಿ, ಜಿಲ್ಲೆಯಲ್ಲಿ ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಯುವ ಶಕ್ತಿಯ ಅಗತ್ಯವಿದ್ದದ್ದನ್ನು ಮನಗಂಡು ವಿಜಯೇಂದ್ರ ಯುವ ಸೇನಾನಿಗೆ ಪಟ್ಟ ಕಟ್ಟಿದ್ದಾರೆ.

ಚಿತ್ರದುರ್ಗ, ತುಮಕೂರು ಲೋಕ ಚುನಾವಣೆಯಲ್ಲಿ ಬಿಜೆಪಿಗೆ ಮುನ್ನಡೆ ಕೊಡಿಸುವ ಜವಾಬ್ದಾರಿ ಈ ಯುವಕರಿಬ್ಬರ ಮೇಲಿದೆ. ‘ಮೋದಿ ಅಲೆ’ಯ ಜತೆಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಪಕ್ಷಕ್ಕಾಗಿ ಹೋರಾಡಲು ಹುಮ್ಮಸ್ಸು ತುಂಬಲು ಅವಳ ಜಿಲ್ಲೆಗಳ ಯುವ ಸಾರಥಿಗಳು ಮುಂದಾಗಬೇಕಿದೆ.

ಸಾಗರನಹಳ್ಳಿ ಹಿನ್ನೆಲೆ

ಮಾಜಿ ಸಚಿವ ದಿವಂಗತ ಸಾಗರನಹಳ್ಳಿ ರೇವಣ್ಣ ಕುಟುಂಬದ ಕುಡಿ ರವಿಶಂಕರ್ ಬಿ.ಇ., ಪದವೀಧರರಾಗಿದ್ದು 2000ರಲ್ಲಿ ಹೆಬ್ಬಾಕ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟರು. 2010ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿ ಪಕ್ಷದೊಳಗೆ ಒಂದೊಂದೆ ಮೆಟ್ಟಿಲು ಹತ್ತಿ, ಪಕ್ಷದಲ್ಲಿ ಹಲವುಬಾರಿ ಅವಕಾಶಗಳು ಕೈತಪ್ಪಿದಾಗಲು ವರಿಷ್ಠರ ವಿರುದ್ಧವಾಗಲಿ, ಸ್ಥಳೀಯ ಮುಖಂಡರ ವಿರುದ್ಧವಾಗಲಿ ಎಂದೂ ಬಹಿರಂಗ ಹೇಳಿಕೆ ನೀಡದೆ ಸಮಾಧನ, ತಾಳ್ಮೆಯಿಂದ ನಡೆದುಕೊಂಡು ಬಂದಿರುವ ರವಿಶಂಕರ್‌ಗೆ ಮತ್ತೊಂದು ಅವಧಿಗೆ ಪಕ್ಷದ ಸಾರಥ್ಯ ಸಿಕ್ಕಿದೆ.

ಸಂಘ ಪರಿವಾರದ ನಂಟು

ಅತೀ ಕಿರಿಯ ವಯಸ್ಸಿನ ಜಿಲ್ಲಾಧ್ಯಕ್ಷನೆಂಬ ಹೆಗ್ಗಳಿಕೆಗೆ ಹುನಮಂತೇಗೌಡ ಭಾಜನರಾಗಿದ್ದಾರೆ. ಇಂಜಿನಿಯರಿಂಗ್ ಪದವೀಧರರಾದ ಹನುಮಂತೇಗೌಡ ಉಪನ್ಯಾಸಕ ವೃತ್ತಿ ತೊರೆದು ಸಂಘಪರಿವಾರದ ಮೂಲಕ ಸಾರ್ವಜನಿಕ ಸೇವೆಗೆ ಅಡಿಯಿಟ್ಟರು. ನಂತರ ಭಾರತೀಯ ಜನತಾ ಪಕ್ಷದ ಜವಾಬ್ದಾರಿ ಪಡೆದು ಚಿತ್ರದುರ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಅವಕಾಶ ಪಡೆದರು. ಪಕ್ಷ ಸಂಘಟನೆ ಛಾತಿಯ ಜತೆಗೆ ಹಲವು ಚುನಾವಣೆಗಳನ್ನು ನಡೆಸಿದ ಅನುಭವವುಳ್ಳ ಹನುಮಂತೇಗೌಡ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಧುಗಿರಿಯಿಂದ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು.