ಜಿಲ್ಲೆ

ತುಮಕೂರು: ಜೆಜೆಎಂ ಗುತ್ತಿಗೆದಾರರು ಕಪ್ಪುಪಟ್ಟಿಗೆ

ತುಮಕೂರು ಡೆಸ್ಕ್

ವಿಳಂಬವಾದ 116 ಕೆಲಸದ ಟೆಂಡರ್​ ಹಣ ಮುಟ್ಟುಗೋಲು | ಈವರೆಗೆ 446 ಕೋಟಿ ರೂ, ಪಾವತಿ | ಜಿಪಂ ಸಿಇಒ ಜಿ.ಪ್ರಭು ಮಾಹಿತಿ

ತುಮಕೂರು: ಜಲ್​ ಜೀವನ್​ ಮಿಷನ್​ ಯೋಜನೆಯಡಿ ಕಳಪೆ ಕಾಮಗಾರಿ ನಡೆಸುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಪಂ ಸಿಇಒ ಜಿ.ಪ್ರಭು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಜೆಜೆಎಂ ಯೋಜನೆ ಅಡಿ ಅಧಿಕಾರಿಗಳ ಮೇಲೆ 40ರಷ್ಟು ಕಮಿಷನ್​ ಆರೋಪವನ್ನು ಗುತ್ತಿಗೆದಾರರ ಸಂದ ಹೊರಿಸಿರುವ ಹಿನ್ನೆಲೆಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ತಮ್ಮ ಹಾಗೂ ಅಧಿಕಾರಿಗಳ ವಿರುದ್ಧ ಬಂದಿರುವ ಆರೋಪ ಸತ್ಯಕ್ಕೆ ದೂರವಾದದು. ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲವೆಂದು ಬಿಲ್​ ಪಾವತಿಯನ್ನು ತಿರಸ್ಕರಿಸಿದಾಗ ಸಹಜವಾಗಿ ಇಂತಹ ಆರೋಪ ಮಾಡಲಾಗುತ್ತದೆ. ನೈಜತೆ ಇಲ್ಲದ ಗಾಳಿ ಸುದ್ದಿಗಳಿಗೆ ನಾನು ತಲೆ ಕೆಡಿಸುವುದಿಲ್ಲ. ನಾನು ಅಧಿಕಾರ ವಹಿಸಿಕೊಂಡ ನಂತರ ಅಶಿಸ್ತು, ಕರ್ತವ್ಯ ರ್ನಿಲಕ್ಷ್ಯತೆ ತೋರಿದ ಸುಮಾರು 20 ಪಿಡಿಒಗಳನ್ನು ಯಾವುದೇ ಮುಲಾಜಿಲ್ಲದೆ ಅಮಾನತು ಮಾಡಿದ್ದೇನೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಜಿ.ಪ್ರಭು ಸ್ಪಷ್ಟನೆ ನೀಡಿದರು.


ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಶೇ.55 ಹಾಗೂ ಕೇಂದ್ರ ಸರ್ಕಾರದ ಶೇ.45ರಷ್ಟು ಅನುದಾನದಲ್ಲಿ ಜಲ್​ ಜೀವನ್​ ಮೀಷನ್​ ಯೋಜನೆ(ಜೆಜೆಎಂ)ಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಈವರೆಗೆ ಒಟ್ಟು 3700 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, 2500 ಕಾಮಗಾರಿಗಳು ಪ್ರಗತಿಯಲ್ಲಿವೆ. 2021ರಿಂದ ಈವರೆಗೆ 100 ಕೋಟಿ ರೂ. ಜಿಎಸ್​ಟಿ ಮೊತ್ತ ಸೇರಿ ಒಟ್ಟು 446 ಕೋಟಿ ರೂ.,ಗಳನ್ನು ಪಾವತಿಸಲಾಗಿದೆ. ಪೂರ್ಣಗೊಂಡಿರುವ 805 ಕಾಮಗಾರಿಗಳಿಗೆ ಸಂಬಂಧಿಸಿದಂತೆ ಶೇ.80ರಷ್ಟು ಹಣ ಪಾವತಿಸಲಾಗಿದೆ. ಕಳಪೆ ಗುಣಮಟ್ಟ ಹಾಗೂ ಕಾಮಗಾರಿ ವಿಳಂಬಗೊಳಿಸಿರುವ 116 ಕಾಮಗಾರಿಗಳ ಟೆಂಡರ್​ ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದರು.

3 ಪಟ್ಟು ಹೆಚ್ಚುವರಿ ಆಸ್ತಿ ಸೃಜನೆ
ಕಳೆದ ವರ್ಷ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 3 ಪಟ್ಟು ಹೆಚ್ಚುವರಿ ಆಸ್ತಿಗಳನ್ನು ಸೃಜನೆ ಮಾಡಲಾಗಿದೆ. ಅಧಿಕಾರಿಗಳ ಶ್ರಮದಿಂದಲೇ ಈ ಸಾಧನೆ ಸಾಧ್ಯವಾಗಿದೆ. ಪ್ರಸಕ್ತ ವರ್ಷ ನರೇಗಾ ಯೋಜನೆಯಡಿ ಯಂತ್ರಗಳನ್ನು ಬಳಸದೆ ಸಮಗ್ರ ಶಾಲಾಭಿವೃದ್ಧಿ, ಆಸ್ಪತ್ರೆ, ರಸ್ತೆ, ಚರಂಡಿ ಕಾಮಗಾರಿ, ಅಂಗನವಾಡಿ ಕೊಠಡಿ ನಿಮಾರ್ಣಕ್ಕಾಗಿ 750 ಕೋಟಿ ರೂ., ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು ಪ್ರಗತಿಯಲ್ಲಿದೆ. 24,58,682 ಮಾನವ ದಿನಗಳನ್ನು ಸೃಜಿಸುವ ಮೂಲಕ ಕೂಲಿ ಕಾರ್ಮಿಕರ ಖಾತೆಗೆ ಒಟ್ಟು 127 ಕೋಟಿ ರೂ.,ಗಳನ್ನು ನೇರವಾಗಿ ಪಾವತಿ ಮಾಡಲಾಗಿದೆ ಎಂದು ಪ್ರಭು ತಿಳಿಸಿದರು.

ಗುಣಮಟ್ಟಕ್ಕೆ ಗ್ರಾಮಸಭೆ
ಜೆಜೆಎಂ ಕಾಮಗಾರಿಗಳು ಪೂರ್ಣಗೊಂಡ ನಂತರ ಆಯಾ ಗ್ರಾಮ ಪಂಚಾಯಿತಿಯಲ್ಲಿ ಕಾಮಗಾರಿ ಗುಣಮಟ್ಟದ ಬಗ್ಗೆ ಗ್ರಾಮ ಸಭೆ ನಡೆಸಲಾಗುವುದು. ಆ ಸಭೆಯಲ್ಲಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ ಗುತ್ತಿಗೆದಾರರಿಗೆ ಬಿಲ್​ ಪಾವತಿ ಮಾಡಲು ಕ್ರಮವಹಿಸಲಾಗುವುದು. ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಯಾವುದೇ ಬಿಲ್​ಗಳು ಬಾಕಿ ಉಳಿಸಿಕೊಳ್ಳದೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿದ್ದಂತೆ ಗುತ್ತಿಗೆದಾರರಿಗೆ ವಿಳಂಬ ಮಾಡದೆ ಸಕಾಲದಲ್ಲಿ ಪಾವತಿ ಮಾಡಲಾಗುತ್ತಿದೆ ಎಂದು ಪ್ರಭು ಸಮರ್ಥಿಸಿಕೊಂಡರು.

ನಿರ್ದಾಕ್ಷಿಣ್ಯ ಕ್ರಮ
ಕರ್ತವ್ಯ ರ್ನಿಲಕ್ಷ, ಸರ್ಕಾರಿ ಯೋಜನೆಗಳ ಪ್ರಗತಿ ಕುಂಠಿತ, ಯೋಜನಾನುಷ್ಠಾನದಲ್ಲಿ ಬೇಜವಾಬ್ದಾರಿ ತೋರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಜಿಪಂನಿಂದ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಆದ್ಯತೆ ಮೇರೆಗೆ ಕಾಯ್ದುಕೊಳ್ಳಲಾಗುತ್ತಿದೆ. ಕಳಪೆ ಕಾಮಗಾರಿಗಳು ಕಂಡು ಬಂದಲ್ಲಿ ತಾಪಂ ಅಥವಾ ಜಿಪಂ ಗಮನಕ್ಕೆ ತಂದಲ್ಲಿ ಕೂಡಲೇ ಕಳಪೆ ಕಾಮಗಾರಿಗೆ ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧವು ಕ್ರಮವಹಿಸಲಾಗುವುದು ಎಂದು ಜಿಪಂ ಸಿಇಒ ಜಿ.ಪ್ರಭು ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಪ್ರತಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಾಗ ಗುಣಮಟ್ಟದ ಪರೀಕ್ಷೆಯನ್ನು 3ನೇ ವ್ಯಕ್ತಿಯಿಂದ ತಪಾಸಣೆ ಮಾಡಿಸಲಾಗುತ್ತಿದೆ. ಲೋಕಸಭಾ ಚುನಾವಣಾ ಮಾದರಿ ನೀತಿ ಸಂಹಿತೆ, ಆರ್ಥಿಕ ವರ್ಷ ಮುಕ್ತಾಯ ಅವಧಿಯಲ್ಲಿ ಜಲ್​ ಜೀವನ್​ ಮಿಷನ್​ ಕಾಮಗಾರಿಗಳ ಬಿಲ್​ ಪಾವತಿ ವಿಳಂಬವಾಗಿದೆ. ಕಾಮಗಾರಿ ಪೂರ್ಣಗೊಂಡ ಒಂದು ತಿಂಗಳ ಅವಧಿಯೊಳಗೆ ಗುತ್ತಿಗೆದಾರರಿಗೆ ಬಿಲ್​ ಪಾವತಿಸಲಾಗುತ್ತಿದೆ.| ಜಿ.ಪ್ರಭು ಜಿಲ್ಲಾ ಪಂಚಾಯಿತಿ ಸಿಇಒ