ತಿಪಟೂರು : ರಸ್ತೆ ಅಪಘಾತಗಳಲ್ಲಿ ತುಮಕೂರು ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಡಿವೈಎಸ್‌ಪಿ ಎನ್.ಚಂದನ್ ಕುಮಾರ್ ಆತಂಕವ್ಯಕ್ತಪಡಿಸಿದರು.
ನಗರದ ಶ್ರೀ ಕೆಂಪಮ್ಮ ದೇವಾಲಯದ ಆವರಣದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಬುಧವಾರ ಆಯೋಜಿಸಿದ್ದ ಜಿಲ್ಲೆಯ ಪ್ರಥಮ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯಲ್ಲಿ ಮಾತನಾಡಿದ ಅವರು, ಅಪಘಾತಗಳಿಗೆ ಕಾರಣವಾಗುವ ಅಂಶಗಳನ್ನು ಪತ್ತೆ ಹಚ್ಚಿ, ಅಪಘಾತಗಳನ್ನು ನಿಯಂತ್ರಿಸಲು ಎಲ್ಲರೂ ಸಹಕಾರ ನೀಡಬೇಕೆಂದರು.
ಅಪಘಾತ ತಡೆಗೆ ಎಲ್ಲೆಡೆ ಬೀಟ್ ಪೊಲೀಸರನ್ನು ನಿಯೋಜಿಸಲಾಗಿದ್ದು, ಮನೆಮನೆಗೆ ತೆರಳಿ, ವಾಹನಗಳ ಸಂಖ್ಯೆ, ಡಿಎಲ್ ವಿಮೆ, ನವೀಕರಣ, ಮುಂತಾದ ಮಾಹಿತಿ ಕಲೆ ಹಾಕಿ ಇವುಗಳಲ್ಲಿ ಲೋಪವಿದ್ದರೆ, ಬೀಟ್ ಪೊಲೀಸರೇ ಆರ್‌ಟಿಒ ಇಲಾಖೆಗೆ ಮಾಹಿತಿ ನೀಡಿ ದಾಖಲೆ ಸರಿಪಡಿಸಲು ಸಹಕರಿಸುತ್ತಾರೆ. ಜತೆಗೆ ನಗರಸಭೆ ಸದಸ್ಯರು, ತಾಪಂ ಸದಸ್ಯರು, ಜಿಪಂ ಸದಸ್ಯರು ಮತ್ತು ಗ್ರಾಪಂ ಸದಸ್ಯರ ಮೂಲಕ ಸಂಬಂಧಪಟ್ಟ ಬಡಾವಣೆಯ ನಾಗರೀಕರಿಗೆ ಸೂಕ್ತ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗುವಂತೆ ಕೋರಲಾಗಿದೆ ಎಂದರು. ರಸ್ತೆ ಅಪಘಾತಕ್ಕೆ ತುತ್ತಾದವರಿಗೆ ನೆರವು ನೀಡಿ, ಆಸ್ಪತ್ರೆಗೆ ದಾಖಲಿಸುವಲ್ಲಿ ಪೊಲೀಸರೊಂದಿಗೆ ಸಹಕರಿಸಿದ ನಗರದ ಸಿದ್ದಿಕ್, ಬಸವರಾಜು, ಜಗದೀಶ್, ಸಂತೋಷ್, ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಒಂದೇ ಬೈಕ್‌ನಲ್ಲಿ ಹೊರಟ ಹಾಲಿ, ಮಾಜಿ ಶಾಸಕರು : ಹೆಲ್ಮೆಟ್ ಹಾಕದೆ ಹೋಗುವ ಬೈಕ್ ಸವಾರರಿಗೆ ಗುಲಾಬಿ ಹೂ ನೀಡಿ ನಗರಸಭೆ ಸದಸ್ಯರು ಅರಿವು ಮೂಡಿಸಿದರು. ಶಾಸಕ ಬಿ.ಸಿ.ನಾಗೇಶ್ ಮತ್ತು ಮಾಜಿ ಶಾಸಕ ಕೆ.ಷಡಕ್ಷರಿ ಒಂದೇ ಬೈಕಿನಲ್ಲಿ ಜಾಗೃತಿ ಮೂಡಿಸಲು ಹೊರಟಾಗ ಇವರಿಗೆ ಮಾಜಿ ಶಾಸಕ ಬಿ.ನಂಜಾಮರಿ ಹಸಿರು ನಿಶಾನೆ ತೋರಿಸಿದ್ದು ವಿಶೇಷವಾಗಿತ್ತು. ನಗರದ ಸಿವಿಲ್ ಮತ್ತು ಹೆಚ್ಚುವರಿ ಕೋರ್ಟಿನ ನ್ಯಾಯಾಧೀಶರಾದ ಶಿವಕುಮಾರ್, ಕ್ರಾಂತಿ ಕುಮಾರ್, ಸತೀಶ್. ಮತ್ತು ಚಂದನ್ ಕುಮಾರ್, ನಗರಸಭೆ ಅಧ್ಯಕ್ಷ ಪಿ.ಜೆ.ರಾಮ ಮೋಹನ್, ಉಪಾಧ್ಯಕ್ಷ ಸೊಪ್ಪು ಗಣೇಶ್, ನಗರಸಭೆ ಸದಸ್ಯರು, ವೃತ್ತ ನಿರೀಕ್ಷಕಿ ಎಸ್.ಜಯಲಕ್ಷ್ಮೀ, ನಗರಠಾಣೆ ಇನ್‌ಸ್ಪೆಕ್ಟರ್ ಎಂ.ಬಿ.ಶಿವಕುಮಾರ್, ಗ್ರಾಮಾಂತರ ಠಾಣೆಯ ಎಸ್‌ಐ ಕೃಷ್ಣಕುಮಾರ್. ಟಿ.ಎಚ್.ಒ. ಡಾ. ರವಿಕುಮಾರ್ ಇದ್ದರು.
ಅಪಘಾತಕ್ಕೆ ಕಾರಣ ಹುಡುಕಿ ಜನತೆಯನ್ನು ಎಚ್ಚರಿಸುತ್ತಿರುವ ಪೊಲೀಸರ ಕಾರ್ಯ ಮಾದರಿ. ನಿಮ್ಮ ಜೀವ ಉಳಿಸಲು ಶ್ರಮಿಸುತ್ತಿರುವ ಪೊಲೀಸರನ್ನು ಕಂಡಕ್ಷಣ ಓಡಿ ಹೋಗಬೇಡಿ, ಸಾರ್ವಜನಿಕರು ಮತ್ತು ಪೊಲೀಸರ ಸಂಬಂಧ ಉತ್ತಮವಾಗಿರಲಿ. ಬಿ.ಸಿ.ನಾಗೇಶ್, ಶಾಸಕ ರಾಷ್ಟ್ರಿಯ ಹೆದ್ದಾರಿಗಳಲ್ಲೇ ರಸ್ತೆ ಅಪಘಾತಗಳು ಹೆಚ್ಚು ಸಂಭವಿಸುತ್ತಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ, ವಿಮೆ, ಚಾಲನಾ ಪರವಾನಗಿ ಇಲ್ಲದೇ ವಾಹನ ಚಲಾಯಿಸಿ, ಅವಘಡಕ್ಕೆ ತುತ್ತಾಗುವುದೂ ಅಲ್ಲದೇ ರಾಜಕಾರಣಿಗಳ ಬಳಿ ಶಿಫಾರಸ್ಸಿಗೆ ಬರುತ್ತಾರೆ. ನಾನೂ ಸೇರಿ ಯಾವ ರಾಜಕಾರಣಿಗಳೂ ಇದರಲ್ಲಿ ಹಸ್ತಕ್ಷೇಪ ಮಾಡಬೇಡಿ. ಕೆ.ಷಡಕ್ಷರಿ, ಮಾಜಿ ಶಾಸಕ