ಜಿಲ್ಲೆ

ಮತ್ತೆ ಪಕ್ಷಾಂತರಕ್ಕೆ ಸಿದ್ಧವಾದ ಮಾಜಿ ಶಾಸಕ ಎಚ್.ನಿಂಗಪ್ಪ!?

ಮತ್ತೆ ಪಕ್ಷಾಂತರಕ್ಕೆ ಸಿದ್ಧವಾದ ಮಾಜಿ ಶಾಸಕ ಎಚ್.ನಿಂಗಪ್ಪ!?

ತುಮಕೂರು: ಮಾಜಿ ಶಾಸಕ ಎಚ್.ನಿಂಗಪ್ಪ ಮತ್ತೊಮ್ಮೆ ಪಕ್ಷಾಂತರಕ್ಕೆ ಸಿದ್ಧತೆ ನಡೆಸಿದ್ದಾರೆ ಎಂಬ ವದಂತಿಗೆ ಪುಷ್ಠಿ ನೀಡುವಂತಹ ಪೋಟೋ ಕಾಂಗ್ರೆಸ್ ಪಾಳಯದಿಂದಲೇ ಹೊರಬಿದ್ದಿದೆ.

ಜಿಲ್ಲೆಯ ಪ್ರವಾಸದಲ್ಲಿರುವ ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಜತೆಯಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ನಿವಾಸದಲ್ಲಿ ಕಾಣಿಸಿಕೊಳ್ಳುವ ಮೂಲಕ ಜೆಡಿಎಸ್‌ಗೆ ಗುಡ್‌ಬೈಗೆ ಹೇಳಿ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಜಾರಲಿದ್ದಾರೆ ಎಂಬ ಸುದ್ದಿಗೆ ಬಲ ನೀಡಿದ್ದಾರೆ.

2008ರ ವರೆಗೂ ಜೆಡಿಎಸ್‌ನಲ್ಲಿಯೇ ಇದ್ದ ಎಚ್.ನಿಂಗಪ್ಪ 2013ರಲ್ಲಿ ಕೆಜೆಪಿಯಿಂದ ಅಭ್ಯರ್ಥಿಯಾಗಿದ್ದರು, ನಂತರ ಕಾಂಗ್ರೆಸ್ ಜತೆ ಗುರುತಿಸಿಕೊಂಡರಾದರೂ 2018ರಲ್ಲಿ ಟಿಕೆಟ್ ಸಿಗಲಿಲ್ಲವೆಂದು ಮತ್ತೆ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದರು.

2023ರ ಚುನಾವಣೆಯಲ್ಲಿ ಅಭ್ಯರ್ಥಿಯಾಗುವ ಕನಸಿನೊಂದಿಗೆ ಮತ್ತೆ ಕಾಂಗ್ರೆಸ್‌ಗೆ ಜಿಗಿಯಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದ್ದು, ತುಮಕೂರು ಗ್ರಾಮಾಂತರದಲ್ಲಿ ಸಮರ್ಥ ಅಭ್ಯರ್ಥಿಯಾಗಿ ಹುಡುಕಾಟ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿಂಗಪ್ಪಗೆ ಗಾಳ ಹಾಕಿದ್ದಾರೆ ಎನ್ನಲಾಗಿದೆ.

ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್ ತೊರೆದು ಕುಣಿಗಲ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು ಅವರ ವಿರುದ್ಧ ಕಾಂಗ್ರೆಸ್ ಬಲ ಹೆಚ್ಚಿಸಿಕೊಳ್ಳಲು ಎಚ್.ನಿಂಗಪ್ಪ ಸೇರ್ಪಡೆಗೆ ಶಾಸಕ ಡಾ.ರಂಗನಾಥ್ ಕೂಡ ವಿಶೇಷ ಆಸಕ್ತಿ ತೋರಿಸಿದ್ದಾರೆ ಎಂಬ ಮಾತಿದೆ.


ಎಚ್.ನಿಂಗಪ್ಪ ಪಕ್ಷಾಂತರ ಹೊಸತೇನಲ್ಲ!


ಸತತ 4 ನಾಲ್ಕು ವಿಧಾನಸಭಾ ಚುನಾವಣೆಯಲ್ಲಿ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ಎಚ್.ನಿಂಗಪ್ಪ 2004ರಲ್ಲಿ 5ನೇ ಪ್ರಯತ್ನದಲ್ಲಿ ಅನುಕಂಪದ ಅಲೆಯಲ್ಲಿ ಗೆದ್ದು ಶಾಸಕರಾಗಿದ್ದರು. ಸತತ ಎರಡು ಚುನಾವಣೆ ಗೆದ್ದು ಹ್ಯಾಟ್ರಿಕ್ ಕನಸು ಕಂಡಿದ್ದ ಎಸ್.ಪಿ.ಮುದ್ದಹನುಮೇಗೌಡ ವಿರುದ್ಧ ಗೆದ್ದಿದ್ದು ಈಗ ಇತಿಹಾಸ.


ನಂತರ ಕ್ಷೇತ್ರ ಪುನರ್‌ವಿಂಗಡನೆ ನಂತರ ತುಮಕೂರು ಗ್ರಾಮಾಂತರದಲ್ಲಿ ಗುರುತಿಸಿಕೊಂಡರಾದರೂ ರಾಜಕೀಯ ಏಳ್ಗೆ ಕಂಡಿಲ್ಲ, ರಾಜಕೀಯ ಜೀವನದಲ್ಲಿ ಏಳು ವಿಧಾನಸಭಾ ಚುನಾವಣೆ ಎದುರಿಸಿ ಒಮ್ಮೆ ಮಾತ್ರ ಗೆದ್ದಿರುವ ನಿಂಗಪ್ಪ ಚುನಾವಣೆ ಸಂದರ್ಭದಲ್ಲಿ ಮಾತ್ರ ಸುದ್ದಿಗೆ ಬರುವುದು ಜನಜನಿತ.