ಜಿಲ್ಲೆ

ನ.3ರಂದು ಮಾಜಿ ಸಂಸದ ಎಸ್‌ಪಿಎಂ ಬಿಜೆಪಿ ಸೇರ್ಪಡೆ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಕಾಂಗ್ರೆಸ್‌ಗೆ ಈಗಾಗಲೇ ಗುಡ್‌ಬೈ ಹೇಳಿರುವ ಜಿಲ್ಲೆಯ ಪ್ರಭಾವಿ ಮುಖಂಡ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಬಿಜೆಪಿ ಸೇರ್ಪಡೆಗೆ ಕಾಲಕೂಡಿ ಬಂದಿದೆ.


ನ.3ರಂದು ಬೆಳಗ್ಗೆ 9ಕ್ಕೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರ್ಪಡೆಗೆ ವೇದಿಕೆ ಸಿದ್ಧವಾಗಿದ್ದು ಹಳೆಮೈಸೂರು ಭಾಗದ ಒಕ್ಕಲಿಗ ಸಮುದಾಯದ ಪ್ರಭಾವಿ ಮುಖಂಡನನ್ನು ಖುದ್ದು ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷರು ಸ್ವಾಗತಿಸಲಿದ್ದಾರೆ ಎನ್ನಲಾಗಿದೆ.


2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡದ ಕಾಂಗ್ರೆಸ್ ನಂತರದಲ್ಲಿ ಮಾತುಕೊಟ್ಟಂತೆ ರಾಜ್ಯಸಭೆಗೂ ಆಯ್ಕೆ ಮಾಡದ ಹಿನ್ನೆಲೆಯಲ್ಲಿ ಮುಖಂಡರ ವರ್ತನೆಗೆ ಬೇಸತ್ತು ಕಳೆದ ಸೆ.1ರಂದು ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ್ದರು.


2023ರ ವಿಧಾನಸಭಾ ಚುನಾವಣೆಯಲ್ಲಿ ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧೆಗೆ ಎಸ್‌ಪಿಎಂ ಒಲವು ತೋರಿದ್ದು ಬಿಜೆಪಿ ಟಿಕೆಟ್ ಖಚಿತಪಡಿಸಿದ ನಂತರವೇ ಆ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎನ್ನಲಾಗಿದೆ.


ಆದರೆ, ಬಿಜೆಪಿ ಹೈಕಮಾಂಡ್ ಮಾತ್ರ ಲೋಕಸಭೆಗೆ ಅವರನ್ನು ಬಳಸಿಕೊಳ್ಳಬೇಕು ಎಂಬ ಚಿಂತನೆಯಲ್ಲಿದ್ದು ಮುಂದಿನ ರಾಜಕೀಯ ನಡೆಯೂ ಕುತೂಹಲ ಮೂಡಿಸಿದೆ.


ಒಕ್ಕಲಿಗ ಸಮುದಾಯದ ಪ್ರಭಾವಿ ಮುಖಂಡ ಎನ್ನಿಸಿರುವ ಮುದ್ದಹನುಮೇಗೌಡ ಅವರನ್ನು ಕುಣಿಗಲ್ ವಿಧಾನಸಭಾ ಕ್ಷೇತ್ರವಲ್ಲದೆ ತುಮಕೂರು ಅಥವಾ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿಯೂ ಬಳಸಿಕೊಳ್ಳಲು ಬಿಜೆಪಿಗೆ ಅವಕಾಶವಾಗಲಿದೆ.

ಸೆ.1ರಂದು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದು ಬಿಜೆಪಿ ಸೇರ್ಪಡೆಯಾಗುವುದಾಗಿ ಈಗಾಗಲೇ ಘೋಷಣೆ ಮಾಡಿದ್ದೆ ನ.3ರಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಪಕ್ಷ ಸೇರಲಿದ್ದೇನೆ. ಬಿಜೆಪಿ ಕೂಡ ರಾಷ್ಟ್ರೀಯ ಪಕ್ಷವಾಗಿದ್ದು ನಾನು ಚುನಾವಣೆಗೆ ಸ್ಫರ್ಧಿಸುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ.
ಎಸ್.ಪಿ.ಮುದ್ದಹನುಮೇಗೌಡ
ಮಾಜಿ ಸಂಸದ