ಜಿಲ್ಲೆ

ಸೇನೆ ವಿರುದ್ಧ ರಾಹುಲ್​ ಹೇಳಿಕೆಗೆ ಬಿಜೆಪಿ ಆಕ್ರೋಶ

ತುಮಕೂರು: ದೇಶ ರಕ್ಷಣೆ ಮಾಡುತ್ತಿರುವ ಭಾರತೀಯ ಸೇನೆ ವಿರುದ್ಧ ಹೇಳಿಕೆ ನೀಡಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿಗೆ ಸುಪ್ರೀಂ ಕೋರ್ಟ್​ ಛೀಮಾರಿ ಹಾಕಿರುವುದನ್ನು ಜಿಲ್ಲಾ ಬಿಜೆಪಿ ಸ್ವಾಗತಿಸಿದೆ.

ಲೋಕಸಭೆ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯನ್ನು ಮರೆತಂತಿರುವ ರಾಹುಲ್​ ಗಾಂಧಿ ಕೇವಲ ಪ್ರಚಾರದ ಉದ್ದೇಶದಿಂದ ದೇಶ ವಿರೋಧಿ ಹೇಳಿಕೆ ಹಿಂದೆಯೂ ನೀಡಿ ಕೋರ್ಟ್​ ತರಾಟೆಗೆ ಒಳಗಾಗಿದ್ದರು. ಅದನ್ನು ಗಮನದಲ್ಲಿಟ್ಟುಕೊಳ್ಳದೆ ಪದೇಪದೆ ಇಂತಹ ಹೇಳಿಕೆ ನೀಡುವ ಚಾಳಿ ಮುಂದುವರೆಸಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​ ಹೇಳಿದ್ದಾರೆ.

ಯಾವುದೇ ಲೋಪಗಳಿದ್ದರೆ ಸಂಸತ್​ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಚರ್ಚೆ ಮಾಡಲು ಅವಕಾಶ ಇದ್ದಾಗಲೂ ಸದನದ ಹೊರಗೆ ದೇಶ ವಿರೋಧಿ ಹೇಳಿಕೆ ನೀಡುತ್ತಿರುವುದು ದೇಶ ಕಾಯುವ ಸೇನಾನಿಗಳಿಗೆ ಹಾಗೂ ದೇಶದ ಪ್ರಜೆಗಳಿಗೆ ಮಾಡಿರುವ ಅವಮಾನವಾಗಿದೆ. ಯಾವುದೇ ದಾಖಲೆ ಇಲ್ಲದೆ ಚೀನಾ ನಮ್ಮ ಎರಡು ಸಾವಿರ ಚದುರ ಕಿಲೋಮೀಟರ್​ ಭೂ ಪ್ರದೇಶವನ್ನು ಆಕ್ರಮಿಸಿಕೊಂಡು 20 ಭಾರತೀಯ ಸೈನಿಕರನ್ನು ಕೊಂದಿದೆ. ಅರುಣಾಚಲ ಪ್ರದೇಶದಲ್ಲಿ ನಮ್ಮ ಸೈನಿಕರ ಮೇಲೆ ಚೀನಾ ಸೈನಿಕರು ಹಲ್ಲೆ ನಡೆಸಿದ್ದಾರೆ ಎಂದು ಹೇಳಿಕೆ ನೀಡಿದ್ದ ಪ್ರಕರಣವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ನೀಡಿರುವ ತೀರ್ಪು ದೇಶದ ಜನರ ಗೌರವದ ಪ್ರತಿಕವಾಗಿದೆ ಎಂದು ತಿಳಿಸಿದ್ದಾರೆ.

ಕೋರ್ಟ್​ ನೀಡಿರುವ ತೀರ್ಪನ್ನು ಕಡೆಗಣಿಸಿ ರಾಹುಲ್​ ಗಾಂಧಿ ಸಹೋದರಿ ಪ್ರಿಯಾಂಕ ಗಾಂಧಿ ಸಹೋದರನ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವುದು ಸರಿಯಲ್ಲ. ಅವರ ನಡೆ ಕಾಂಗ್ರೆಸ್​ ಸಂಸ್ಕತಿಯನ್ನು ತೋರಿಸುತ್ತದೆ. ರಾಹುಲ್​ಗೆ ಉತ್ತಮ ವೈದ್ಯರ ಸಲಹೆ ಅಗತ್ಯವಿದೆ. ದೇಶ ವಿರೋಧಿ ಹೇಳಿಕೆ ನೀಡುವುದನ್ನು ರಾಹುಲ್​ ಗಾಂಧಿ ಹಾಗೂ ಕಾಂಗ್ರೆಸ್ಸಿಗರು ನಿಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.