ಜಿಲ್ಲೆ

ಕೆಂಪೇಗೌಡರ ರಥಯಾತ್ರೆಗೆ ತಿಪಟೂರಿನಲ್ಲಿ ಅಪಸ್ವರ; ಸಚಿವ ಬಿ.ಸಿ.ನಾಗೇಶ್ ಮುಂದೆಯೇ ಕೈಕೈ ಮಿಲಾಯಿಸಿದ ಗ್ರಾಮಸ್ಥರು

ತುಮಕೂರು: ಕೆಂಪೇಗೌಡರ ಪ್ರತಿಮೆ ಉದ್ಘಾಟನೆಗೆ ಮೃತ್ತಿಕೆ ಸಂಗ್ರಹಕ್ಕೆ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ರಥಯಾತ್ರೆ ಬಗ್ಗೆ ತಿಪಟೂರು ತಾಲೂಕಿನಲ್ಲಿ ಅಪಸ್ವರ ಕೇಳಿಬಂದಿದೆ.

ತಿಪಟೂರು ತಾಲೂಕಿನ ಚಿಕ್ಕ ಹೊನ್ನವಳ್ಳಿ ಗ್ರಾಮಸ್ಥರು ಸಚಿವ ಬಿ.ಸಿ.ನಾಗೇಶ್‌ಗೆ ತರಾಟೆಗೆ ತೆಗೆದುಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ಒಕ್ಕಲಿಗ ಸಮುದಾಯವಿರುವ ಗ್ರಾಮಗಳಿಗಷ್ಟೇ ರಥಯಾತ್ರೆ ಕರೆದೊಯ್ಯಲಾಗುತ್ತಿದೆ ಎಂದು ಆರೋಪಿಸಿರುವ ಕೆಲವರು ಗಲಾಟೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚುನಾವಣೆ ಹಿನ್ನೆಲೆಯಲ್ಲಿ ರಥಯಾತ್ರೆಯನ್ನು ಒಕ್ಕಲಿಗ ಸಮುದಾಯವಿರುವ ಗ್ರಾಮಗಳಿಗಷ್ಟೇ ಕರೆತರಲಾಗುತ್ತಿದೆ, ಕೆಂಪೇಗೌಡರನ್ನು ಎಲ್ಲಾ ಸಮುದಾಯದವರು ಗೌರವಿಸುತ್ತಿದ್ದು ರಾಜಕಾರಣ ಮಾಡಬಾರದು ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಸಚಿವರ ಪರವಾಗಿಯೂ ಒಂದು ಗುಂಪು ಬಂದಿದ್ದು ಪರಸ್ಪರ ತಲ್ಲಾಟ, ನೂಕಾಟ ನಡೆದಿದೆ. ಸ್ಥಳದಲ್ಲಿಯೇ ಇದ್ದ ತಿಪಟೂರು ಗ್ರಾಮಾಂತರ ಠಾಣೆ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಒದ್ದಾಡಿದ್ದಾರೆ.