ಜಿಲ್ಲೆ

ಉಂಡೆ ಕೊಬ್ಬರಿ ಕನಿಷ್ಟ ಬೆಂಬಲ ಬೆಲೆ ಕೇವಲ 2.50ರೂ. ಹೆಚ್ಚಳ; ಜನವರಿಯಿಂದಲೇ ಖರೀದಿ ಕೇಂದ್ರ ಆರಂಭ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಉಂಡೆ ಕೊಬ್ಬರಿಗೆ ಕನಿಷ್ಟ ಬೆಂಬಲ ಬೆಲೆ ಹೆಚ್ಚಳ ಮಾಡಬೇಕು ಎಂಬ ತೆಂಗು ಬೆಳೆಗಾರರ ಬೇಡಿಕೆಗೆ ಕೇಂದ್ರ ಸರ್ಕಾರ ಕಿವಿಗೊಟ್ಟಿದ್ದು ಉಂಡೆ ಕೊಬ್ಬರಿಗೆ ಕ್ವಿಂಟಲ್‌ಗೆ 250ರೂ. ಎಂಎಸ್‌ಪಿ ಹೆಚ್ಚಿಸಿದೆ. ಅಂದರೆ ಒಂದು ಕೆಜಿಗೆ ಕೇವಲ 2.50ರೂ. ಮಾತ್ರ.

ಬುಧವಾರ ನಡೆದ ಕೇಂದ್ರ ಕ್ಯಾಬಿನೆಟ್ ಸಭೆಯಯಲ್ಲಿ ಕನಿಷ್ಟ ಬೆಂಬಲ ಬೆಲೆ ಹೆಚ್ಚಿಸಲು ಒಪ್ಪಿಗೆ ನೀಡಲಾಗಿದ್ದು ಉಂಡೆ ಕೊಬ್ಬರಿಗೆ ಕ್ವಿಂಟಲ್ 12000 ಹಾಗೂ ಮಿಲ್ಲಿಂಗ್ ಕೊಬ್ಬರಿ ಕ್ವಿಂಟಲ್‌ಗೆ 11160 ರೂಪಾಯಿಗೆ ಹೆಚ್ಚಿಸಲು ಒಪ್ಪಿಗೆ ಸಿಕ್ಕಿದೆ. ಮಾರುಕಟ್ಟೆಯಲ್ಲಿ ಕೆಜಿ ಕೊಬ್ಬರಿಗೆ 80ರೂ. ಕಡಿಮೆಯಾಗಿದೆಯಾದರೂ ಕೇಂದ್ರ ಸರ್ಕಾರ ಬೆಲೆ ಹೆಚ್ಚಿಸಿರುವುದು ಮಾತ್ರ 2.50ರೂ.

ಪ್ರಸ್ತುತ ಕ್ವಿಂಟಲ್ ಕೊಬ್ಬರಿಗೆ 12000 ಜತೆಗೆ 1500 ಸೇರಿ ಒಟ್ಟು 13500ರೂ. ಸಿಗಲಿದ್ದು ತೆಂಗು ಬೆಳೆಗಾರರು ಕೊಂಚವಾದರೂ ಉಸಿರಾಡುವಂತಾಗಲಿದೆ. ಜನವರಿಗೆ ಎರಡನೇ ವಾರದಲ್ಲಿ ನಫೆಡ್ ಮೂಲಕ ಕೊಬ್ಬರಿ ಖರೀದಿಗೆ ಚಾಲನೆ ಸಿಗಲಿದೆ.

2024 ಋತುವಿನಲ್ಲಿ ಕೊಪ್ಪರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಅನುಮೋದನೆ ನೀಡಿದ್ದು 2024ರ ಋತುವಿನಲ್ಲಿ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಹೆಚ್ಚಿಳವಾಗಲಿದೆ.

ನೋಡಲ್ ಏಜೆನ್ಸಿಗಳಾಗಿ ನಫೆಡ್ ಹಾಗೂ ಎನ್‌ಸಿಸಿಎಫ್ ಮುಂದುವರಿಸಿದ್ದು ಖರೀದಿ ಪ್ರಕ್ರಿಯೆಯಲ್ಲಿ ವ್ಯಾಪಾರಿಗಳು ಲಾಭ ಮಾಡಿಕೊಳ್ಳಲು ಅವಕಾಶವಾಗದೆ ಪಾರದರ್ಶಕತೆ ಅಳವಡಿಸುವ ಅಗತ್ಯವಿದೆ.