ತುಮಕೂರು: ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ವಿರುದ್ಧ ಸ್ವಜನ ಪಕ್ಷಪಾತದ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ದಾಖಲೆಗಳನ್ನು ಸಿಂಡಿಕೇಟ್ ಸಭೆಯಲ್ಲಿ ನೀಡದೆ ಮುಚ್ಚಿಡಲಾಗಿದೆ ಎಂದು ಸಿಂಡಿಕೇಟ್ ಸದಸ್ಯರಾದ ಆರ್.ಕೆ.ಶ್ರೀನಿವಾಸ್, ಟಿ.ಎಸ್.ಸುನೀಲ್‌ಪ್ರಸಾದ್ ಆರೋಪಿಸಿದರು.
ವಿವಿ ಕಚೇರಿಯಲ್ಲಿ ಬುಧವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಸದಸ್ಯರು ಹಾಗೂ ಕುಲಪತಿ ವೈ.ಎಸ್.ಸಿದ್ದೇಗೌಡ ನಡುವೆ ಜಟಾಪಟಿ ನಡೆದಿದ್ದು, ವಿವಾದ ರಾಜ್ಯಪಾಲರ ಅಂಗಳ ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದರು.
ಸಿಂಡಿಕೇಟ್ ಸಭೆಯಲ್ಲಿ ಮಹತ್ವದ ವಿಷಯಗಳನ್ನು ಚರ್ಚಿಸಲಾಗಿದೆ. ಕರೊನಾ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಕಾಲೇಜು ಸಂಯೋಜನಾ ಶುಲ್ಕ ವಿನಾಯಿತಿ, ಕ್ರೀಡಾ ಶುಲ್ಕದ ಸಂಪೂರ್ಣ ವಿನಾಯಿತಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದ್ದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಲಾಗಿದೆ ಎಂದರು.
ಅಧ್ಯಯನ ಪೀಠಗಳಲ್ಲಿ ಠೇವಣಿ ಬಡ್ಡಿ ಹಣ ಬಳಸಿಕೊಂಡಿಲ್ಲ, ಶಿರಾ ಸ್ನಾತಕೋತ್ತರ ಕೇಂದ್ರ ಕಟ್ಟಡ ನಿರ್ಮಾಣವಾಗಿದ್ದರೂ ಉದ್ಘಾಟನೆಯಾಗಿಲ್ಲ, ಕೈಗಾರಿಕಾ ಕೌಶಲ ಕೇಂದ್ರ ಆರಂಭಿಸಿಲ್ಲ, ಬಿ.ಕಾಂ ಪದವಿ ಪಠ್ಯದಲ್ಲಿ ಜಿಎಸ್‌ಟಿ ಬಗ್ಗೆ ವಿಷಯವೇ ಇಲ್ಲದಿರುವುದು ಸೇರಿ ಕುಲಪತಿ ಕುಟುಂಬ ಸದಸ್ಯರಿಗೆ ನಿಯಮಬಾಹಿರವಾಗಿ ಉದ್ಯೋಗ ನೀಡಿರುವ ಬಗ್ಗೆ ಸಿಂಡಿಕೇಟ್ ಸದಸ್ಯರಾದ ಪ್ರಸನ್ನಕುಮಾರ್, ರಾಜು, ಟಿ.ಡಿ.ವಿನಯ್, ಭಾಗ್ಯಲಕ್ಷ್ಮೀ ಹಾಗೂ ನಾವು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಹಾಗೂ ರಾಜ್ಯಪಾಲರಿಗೆ ದೂರು ನೀಡಲಿದ್ದೇವೆ ಎಂದರು.
ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅವರು, ಸಿಂಡಿಕೇಟ್ ಸಭೆಯ ಒಪ್ಪಿಗೆ ಇಲ್ಲದೆ ವಿದ್ಯಾರ್ಹತೆ ಇಲ್ಲದಿದ್ದರೂ ಅವರ ಅಣ್ಣನ ಮಗನಿಗೆ ಎನ್ನೆಸ್ಸೆಸ್ ವಿಭಾಗದಲ್ಲಿ ಅಕ್ರಮವಾಗಿ ನೇಮಕಾತಿ ಮಾಡಿಕೊಂಡಿದ್ದಾರೆ. ವಿವಿ ಅತಿಥಿ ಗೃಹದಲ್ಲಿಯೇ ಕಳೆದೊಂದು ವರ್ಷದಿಂದ ಅವರ ಸಂಬಂಧಿಕರಿಗೆ ವಾಸ್ತವ್ಯಕ್ಕೆ ಅವಕಾಶ ನೀಡಿದ್ದು, ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಸರಿಯಾದ ಮಾಹಿತಿ ನೀಡಿಲ್ಲ. ಆಡಳಿತದಲ್ಲಿನ ಸ್ವಜನ ಪಕ್ಷಪಾತದಿಂದ ವಿವಿ ಶೈಕ್ಷಣಿಕ ಚಟುವಟಿಕೆಗಳಿಗೆ ಗರಬಡಿದಿದೆ. ಆರ್.ಕೆ.ಶ್ರೀನಿವಾಸ್ ಮತ್ತು ಟಿ.ಎಸ್.ಸುನೀಲ್‌ಪ್ರಸಾದ್ ಸಿಂಡಿಕೇಟ್ ಸದಸ್ಯರು ತುಮಕೂರು ವಿವಿ ಶೈಕ್ಷಣಿಕ ಬೆಳವಣಿಗೆಯ ದೃಷ್ಟಿಯಿಂದ ಸಿಂಡಿಕೇಟ್ ಸದಸ್ಯರು ನೀಡುವ ಸಲಹೆಗಳನ್ನು ಸ್ವೀಕರಿಸಿದೆ. ಆದರೆ, ಆಧಾರ ರಹಿತ ಆರೋಪಗಳಿಗೆ ನಾವು ಉತ್ತರಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿವಿ ಗುಣಾತ್ಮಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ಎಲ್ಲರೂ ಸಹಕಾರ ನೀಡಬೇಕು. ವೈ.ಎಸ್.ಸಿದ್ದೇಗೌಡ, ಕುಲಪತಿ, ತುಮಕೂರು ವಿವಿ